ಧರ್ಮಸ್ಥಳ ದೂರು| ಸಮಾಧಿ ತನಿಖೆಗೆ ತಾಂತ್ರಿಕ ನೆರವು; ದೇಶ ವಿದೇಶಗಳ ತಜ್ಞರಿಂದ ಸಂಪರ್ಕ: ಸುಜಾತಾ ಭಟ್ ವಕೀಲರ ಹೇಳಿಕೆ

ಬೆಂಗಳೂರು, ಜು. 23: ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆಗೆ ದೇಶ ಮತ್ತು ವಿದೇಶಗಳಿಂದ ಅನೇಕ ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಜ್ಞರು ತಮ್ಮ ತಾಂತ್ರಿಕ ಪರಿಣತಿ ಹಾಗೂ ಅನುಭವವನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ, 'ಧರ್ಮಸ್ಥಳ ದೂರು'ದಾರೆ ಸುಜಾತ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಈ ತಂತ್ರಜ್ಞರು ಸಮಾಧಿ ತೆಗೆಯುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಹೊಸ ತಂತ್ರಜ್ಞಾನ ಮತ್ತು ವಿಧಾನಗಳನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಜಾತಾ ಭಟ್ ಅವರ ಕಾನೂನುಬದ್ಧ ಹಕ್ಕನ್ನು ಗುರುತಿಸಿ, ವಿಶೇಷ ತನಿಖಾ ತಂಡ (SIT) ತಮ್ಮ ವೈಜ್ಞಾನಿಕ ವಿಷಯಗಳ ಸಂಪರ್ಕ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ನಾವು ಆಗ್ರಹಿಸುತ್ತೇವೆ. ಇದರಿಂದ ಈ ತಜ್ಞರು ನೇರವಾಗಿ ಸಂವಹನ ನಡೆಸಲು ಮತ್ತು ತಮ್ಮ ಸೇವೆಗಳನ್ನು ಸ್ವಯಂ ಪ್ರೇರಿತರಾಗಿ ನೀಡಲು ಸಾಧ್ಯವಾಗುತ್ತದೆ. ಈ ರೀತಿಯ ಸಹಯೋಗವು ಸಮಾಧಿ ತೆಗೆಯುವ ಕಾರ್ಯವೈಖರಿಯನ್ನು ಉತ್ತಮಗೊಳಿಸಿ, ಸತ್ಯವನ್ನು ಬಯಲಿಗೆ ತರಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ತಮ್ಮ ಪರಿಣತಿ ಮತ್ತು ಬೆಂಬಲ ನೀಡಿದ ಎಲ್ಲಾ ತಜ್ಞರಿಗೆ ನಾವು ಹೃತ್ಪೂರ್ವಕ ಕೃತಜ್ಞತೆ ಯನ್ನು ಸಲ್ಲಿಸುತ್ತೇವೆ. ಈ ಸಹಕಾರದಿಂದ ತನಿಖೆಗೆ ಮತ್ತಷ್ಟು ಬಲ ದೊರಕಿದ್ದು, ನ್ಯಾಯದ ನಿರೀಕ್ಷೆಯಲ್ಲಿ ಇರುವ ಕುಟುಂಬಗಳಿಗೆ ಪರಿಹಾರ ಮತ್ತು ನೈತಿಕ ಸಮಾಧಾನ ದೊರಕಲು ಸಹಾಯವಾಗಲಿದೆ ಎಂಬ ವಿಶ್ವಾಸವಿದೆ ಎಂದು ವಕೀಲ ಮಂಜುನಾಥ್ ಎನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







