ವಿದ್ಯುತ್ ವಹಿವಾಟಿಗೆ ಡಿಜಿಟಲ್ ವೇದಿಕೆ ಅನುಷ್ಠಾನ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು : ಕರ್ನಾಟಕದ ವಿದ್ಯುತ್ ವಲಯದ ವಹಿವಾಟುಗಳನ್ನು ಮತ್ತಷ್ಟು ಪಾರದರ್ಶಕ, ಹೊಣೆಗಾರಿಕೆಯುತ, ನಿಖರ ಮತ್ತು ವೇಗಗೊಳಿಸುವ ಉದ್ದೇಶದಿಂದ ಕೆಪಿಟಿಸಿಎಲ್-ಜಿಟಿಡಿ ಸಮಗ್ರ ಡಿಜಿಟಲ್ ವೇದಿಕೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಅವರ ನಿರ್ದೇಶನದಂತೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕೆಪಿಟಿಸಿಎಲ್-ಜಿಟಿಡಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕಾರ್ಯಗಳನ್ನು ಆರಂಭಿಸಿದ್ದು, ಸಂಬಂಧಿತ ವಿಭಾಗಗಳು ಹಾಗೂ ಸಂಸ್ಥೆಗಳ ನಡುವಿನ ದತ್ತಾಂಶ ಮತ್ತು ಪ್ರಕ್ರಿಯೆಗಳ ಏಕೀಕರಣಕ್ಕೆ ಕ್ರಮ ಕೈಗೊಂಡಿದ್ದಾರೆ. ವಿದ್ಯುತ್ ಉತ್ಪಾದನಾ ಸಂಸ್ಥೆಗಳು, ಕೆಪಿಟಿಸಿಎಲ್, ವಿದ್ಯುತ್ ಸರಬರಾಜು ಕಂಪೆಗಳು ಹಾಗೂ ಇತರೆ ಸಂಬಂಧಿತ ಸಂಸ್ಥೆಗಳ ನಡುವಿನ ಪ್ರಮುಖ ವಹಿವಾಟುಗಳನ್ನು ಒಂದೇ ಕೇಂದ್ರೀಕೃತ ಡಿಜಿಟಲ್ ವೇದಿಕೆಯಲ್ಲಿ ಜೋಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈವರೆಗೆ ವಿವಿಧ ಹಂತಗಳಲ್ಲಿ ಪ್ರತ್ಯೇಕವಾಗಿ ಹಾಗೂ ಹಸ್ತಚಾಲಿತವಾಗಿ ನಡೆಯುತ್ತಿದ್ದ ವಿದ್ಯುತ್ ಖರೀದಿ–ಮಾರಾಟ, ಬಿಲ್ಲಿಂಗ್, ಇಂಧನ ಸಮನ್ವಯ, ಬ್ಯಾಂಕಿಂಗ್, ಓಪನ್ ಆಕ್ಸೆಸ್ ಮತ್ತು ಹಣಕಾಸು ಇತ್ಯರ್ಥ ಪ್ರಕ್ರಿಯೆಗಳನ್ನು ಡಿಜಿಟಲ್ ಹಾಗೂ ಸ್ವಯಂಚಾಲಿತಗೊಳಿಸಲಾಗುತ್ತದೆ. ಇದರಿಂದ ಮಾನವ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ, ವಹಿವಾಟಿನಲ್ಲಿ ಪಾರದರ್ಶಕತೆ, ನಿಖರತೆ, ಹೊಣೆಗಾರಿಕೆ ಹಾಗೂ ವೇಗ ಹೆಚ್ಚಲಿದೆ. ಜತೆಗೆ, ಮೀಟರ್ ಗಳಿಂದ ನೇರವಾಗಿ ದತ್ತಾಂಶ ಪಡೆಯುವ ಎಂಆರ್ ಐ 15 ನಿಮಿಷಗಳ ಬ್ಲಾಕ್ ಮಟ್ಟದ ದತ್ತಾಂಶ ಹಾಗೂ ಇಂಟರ್ ಫೇಸ್ ಪಾಯಿಂಟ್ ಮಾಹಿತಿಯನ್ನು ವ್ಯವಸ್ಥೆಯೊಂದಿಗೆ ಜೋಡಿಸುವ ಮೂಲಕ ಹಸ್ತಚಾಲಿತ ದತ್ತಾಂಶ ನಮೂದು ಮತ್ತು ಲೆಕ್ಕಾಚಾರದ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯುತ್ ವಲಯದಲ್ಲಿ ಉತ್ಪಾದನೆಯಿಂದ ವಿತರಣೆಯವರೆಗೆ ಅನೇಕ ಸಂಸ್ಥೆಗಳು ಮತ್ತು ಹಂತಗಳು ಕಾರ್ಯನಿರ್ವಹಿಸುತ್ತವೆ. ಈವರೆಗೆ ಪ್ರತ್ಯೇಕವಾಗಿ ಮತ್ತು ಹಸ್ತಚಾಲಿತವಾಗಿ ನಡೆಯುತ್ತಿದ್ದ ಪ್ರಮುಖ ಪ್ರಕ್ರಿಯೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒಂದೇ ಡಿಜಿಟಲ್ ವೇದಿಕೆಯಲ್ಲಿ ಜೋಡಿಸುವುದು ನಮ್ಮ ಉದ್ದೇಶ. ಇದರಿಂದ ವಿದ್ಯುತ್ ಉತ್ಪಾದಕರು, ಖರೀದಿದಾರರು, ಪ್ರಸರಣ ಮತ್ತು ವಿತರಣಾ ಸಂಸ್ಥೆಗಳು ಸೇರಿದಂತೆ ಎಲ್ಲ ಪಾಲುದಾರರಿಗೆ ವಹಿವಾಟು ಮತ್ತಷ್ಟು ಪಾರದರ್ಶಕ, ವೇಗವಾದ ಮತ್ತು ಸುಗಮವಾಗಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.






