‘ಎಸ್‍ಐಆರ್’ ಮಂಡ್ಯ ಜಿಲ್ಲೆಯ 1.50 ಲಕ್ಷ ಮತದಾರರಿಗೆ ನೋಟಿಸ್ : ದಿನೇಶ್ ಗೂಳಿಗೌಡ ಕಳವಳ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ಮಂಡ್ಯ ಜಿಲ್ಲೆಯ 1,50,271 ಮತದಾರರಿಗೆ ನೋಟಿಸ್ ಜಾರಿಯಾಗುತ್ತಿರುವುದರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಆ.18ರಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ವರದಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಅಂಗವಾಗಿ ಬಿಡುಗಡೆ ಮಾಡಿರುವ ‘ತಾರ್ಕಿಕ ವ್ಯತ್ಯಾಸಗಳು' ಮತ್ತು ‘ಮ್ಯಾಪಿಂಗ್ ಆಗದಿರುವ' (No Mapping) ಅಂಕಿ-ಅಂಶಗಳು ಮಂಡ್ಯ ಜಿಲ್ಲೆಯ ಮಟ್ಟಿಗೆ ಅತ್ಯಂತ ಆಘಾತಕಾರಿಯಾಗಿವೆ ಎಂದು ಅವರು ಹೇಳಿದ್ದಾರೆ.
ರಾಜಧಾನಿ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿದರೆ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ತಾರ್ಕಿಕ ವ್ಯತ್ಯಾಸಗಳ ಪಟ್ಟಿ ಇರುವುದು ಹಾಗೂ ಅತಿ ಹೆಚ್ಚು ನೋಟಿಸ್‍ಗಳು ಜಾರಿಯಾಗುತ್ತಿರುವುದು ಮಂಡ್ಯ ಜಿಲ್ಲೆಯಲ್ಲಿಯೇ ಎಂಬುದು ಕಳವಳಕಾರಿ ಸಂಗತಿಯಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಶೇ. 2.44 (20,192 ನೋಟಿಸ್) ಹಾಗೂ ಹಾಸನ ಜಿಲ್ಲೆಯಲ್ಲಿ ಶೇ. 5.80 (79,778 ನೋಟಿಸ್) ನಷ್ಟು ಮಾತ್ರ ನೋಟಿಸ್‍ಗಳು ದಾಖಲಾಗಿದ್ದರೆ, ಮಂಡ್ಯ ಜಿಲ್ಲೆಯೊಂದರಲ್ಲೇ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಶೇ.10.67 ರಷ್ಟು ಮತದಾರರಿಗೆ (ಒಟ್ಟು 1,50,271 ನೋಟಿಸ್‍ಗಳು) ನೋಟಿಸ್ ಜಾರಿಯಾಗುತ್ತಿರುವುದು ಗಂಭೀರ ಆತಂಕವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ನೋಟಿಸ್‍ಗಳ ವಿವರ: ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆ.18ರಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಅತಿ ಹೆಚ್ಚು ನೋಟಿಸ್‍ಗಳು ಜಾರಿಯಾಗಿರುವುದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ 36,142 ತಾರ್ಕಿಕ ವ್ಯತ್ಯಾಸಗಳು ಹಾಗೂ 1,627 ನೋ-ಮ್ಯಾಪಿಂಗ್ ಸೇರಿದಂತೆ ಒಟ್ಟು 37,769 (ಶೇ. 19.44) ನೋಟಿಸ್‍ಗಳು ದಾಖಲಾಗಿವೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ನಂತರದ ಸ್ಥಾನದಲ್ಲಿ ಮಂಡ್ಯ ಕ್ಷೇತ್ರವಿದ್ದು, 18,259 ತಾರ್ಕಿಕ ವ್ಯತ್ಯಾಸ ಹಾಗೂ 7,042 ನೋ-ಮ್ಯಾಪಿಂಗ್ ಒಳಗೊಂಡಂತೆ ಒಟ್ಟು 25,301 (ಶೇ. 13.06) ನೋಟಿಸ್‍ಗಳು ಬಂದಿವೆ. ನಾಗಮಂಗಲ ಕ್ಷೇತ್ರದಲ್ಲಿ 20,829 ತಾರ್ಕಿಕ ವ್ಯತ್ಯಾಸ ಮತ್ತು 2,715 ನೋ-ಮ್ಯಾಪಿಂಗ್ ಸೇರಿ ಒಟ್ಟು 23,544 (ಶೇ. 11.70) ನೋಟಿಸ್‍ಗಳು, ಮಳವಳ್ಳಿ ಕ್ಷೇತ್ರದಲ್ಲಿ 19,625 ತಾರ್ಕಿಕ ವ್ಯತ್ಯಾಸ ಹಾಗೂ 1,228 ನೋ-ಮ್ಯಾಪಿಂಗ್ ಸೇರಿದಂತೆ ಒಟ್ಟು 20,853 (ಶೇ. 9.36) ನೋಟಿಸ್‍ಗಳು ಜಾರಿಯಾಗಲಿವೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 13,374 ತಾರ್ಕಿಕ ವ್ಯತ್ಯಾಸ ಹಾಗೂ 2,961 ನೋ-ಮ್ಯಾಪಿಂಗ್ ಸೇರಿ 16,335 (ಶೇ. 8.22) ನೋಟಿಸ್‍ಗಳು, ಮೇಲುಕೋಟೆ ಕ್ಷೇತ್ರದಲ್ಲಿ 12,451 ತಾರ್ಕಿಕ ವ್ಯತ್ಯಾಸ ಮತ್ತು 1,146 ನೋ-ಮ್ಯಾಪಿಂಗ್ ಒಳಗೊಂಡು ಒಟ್ಟು 13,597 (ಶೇ. 7.02) ನೋಟಿಸ್‍ಗಳು ಹಾಗೂ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ 10,306 ತಾರ್ಕಿಕ ವ್ಯತ್ಯಾಸ ಮತ್ತು 2,566 ನೋ-ಮ್ಯಾಪಿಂಗ್ ಸೇರಿ ಒಟ್ಟು 12,872 (ಶೇ. 6.31) ನೋಟಿಸ್‍ಗಳು ಜಾರಿಯಾಗಲಿವೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಈ ಮೂಲಕ ಇಡೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,30,986 ತಾರ್ಕಿಕ ವ್ಯತ್ಯಾಸ ಹಾಗೂ 19,285 ನೋ-ಮ್ಯಾಪಿಂಗ್ ಸೇರಿದಂತೆ ಬರೋಬ್ಬರಿ 1,50,271 (ಶೇ. 10.67) ನೋಟಿಸ್‍ಗಳು ದಾಖಲಾಗಿವೆ (ಇದರ ಜೊತೆಗೆ ಈಗಾಗಲೇ 1,67,485 ಮತದಾರರು ಎಎಸ್‍ಡಿಡಿಒ ಪಟ್ಟಿಯಲ್ಲಿದ್ದಾರೆ) ಎಂದು ಅವರು ಗಮನ ಸೆಳೆದಿದ್ದಾರೆ.
ಎದುರಾಗಿರುವ ಗಂಭೀರ ಸಮಸ್ಯೆಗಳು: ತಾಂತ್ರಿಕ ಕಾರಣಗಳು, ಹೆಸರಿನ ವ್ಯತ್ಯಾಸ, ಮನೆ ಸಂಖ್ಯೆ ಮ್ಯಾಪಿಂಗ್ ಆಗದಿರುವುದು ಮುಂತಾದ ಸಣ್ಣಪುಟ್ಟ ಲೋಪಗಳಿಗೆ ಬೃಹತ್ ಪ್ರಮಾಣದಲ್ಲಿ ನೋಟಿಸ್ ನೀಡುತ್ತಿರುವುದರಿಂದ ಗ್ರಾಮೀಣ ಮತ್ತು ಜನಸಾಮಾನ್ಯ ಮತದಾರರು ತೀವ್ರ ಗೊಂದಲಕ್ಕೊಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೋಟಿಸ್‍ಗಳಿಗೆ ಹೇಗೆ ಉತ್ತರಿಸಬೇಕು? ಯಾವ ದಾಖಲೆಗಳನ್ನು ಒದಗಿಸಬೇಕು? ಮತ್ತು ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೇಗೆ ಉಳಿಸಿಕೊಳ್ಳಬೇಕು? ಎಂಬ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ತಿಳಿವಳಿಕೆಯಿಲ್ಲ. ನೋಟಿಸ್‍ಗೆ ನಿಗದಿತ ಅವಧಿಯಲ್ಲಿ ಸೂಕ್ತ ದಾಖಲೆ ನೀಡದಿದ್ದರೆ, ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಏಕಾಏಕಿ ಮತದಾರರ ಪಟ್ಟಿಯಿಂದ ರದ್ದಾಗುವ ಭೀತಿ ಎದುರಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಜಿಲ್ಲಾಡಳಿತದ ಮುಂದೆ ನಮ್ಮ ಪ್ರಮುಖ ಬೇಡಿಕೆಗಳು: ಜಿಲ್ಲೆಯ ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ‘ತಾರ್ಕಿಕ ವ್ಯತ್ಯಾಸಗಳು' ಮತ್ತು ‘ಮ್ಯಾಪಿಂಗ್ ಆಗದಿರುವ' ಅಡಿಯಲ್ಲಿ ನೋಟಿಸ್‍ಗೆ ಒಳಪಟ್ಟಿರುವ ಮತದಾರರ ನಿಖರ ಪಟ್ಟಿಯನ್ನು (ಬೂತ್‍ವಾರು ಮಾಹಿತಿ) ಸಾರ್ವಜನಿಕವಾಗಿ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕೂಡಲೇ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಎಲ್‍ಒಗಳ ಸಕ್ರಿಯ ಕಾರ್ಯಾಚರಣೆ: ಕೇವಲ ನೋಟಿಸ್ ನೀಡಿ ಸುಮ್ಮನಾಗದೆ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ಸಂಗ್ರಹಿಸಿ ಅಪ್‍ಲೋಡ್ ಮಾಡಲು ನೆರವಾಗುವಂತೆ ನಿರ್ದೇಶನ ನೀಡಬೇಕು ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಬಿಎಲ್‍ಎಗಳೊಂದಿಗೆ ಸಮನ್ವಯ: ಮತಗಟ್ಟೆ ಮಟ್ಟದ ಏಜೆಂಟರು ಹಾಗೂ ಸ್ಥಳೀಯ ಮುಖಂಡರಿಗೆ ಆಯಾ ಮತಗಟ್ಟೆಯ ಲೋಪಗಳ ಬಗ್ಗೆ ಮಾಹಿತಿ ನೀಡಿ, ಮತದಾರರಿಗೆ ಮಾರ್ಗದರ್ಶನ ನೀಡಲು ಸಮನ್ವಯ ಸಭೆಗಳನ್ನು ಆಯೋಜಿಸಬೇಕು ಎಂದು ಅವರು ಕೋರಿದ್ದಾರೆ.
ವಿಶೇಷ ಜಾಗೃತಿ ಅಭಿಯಾನ: ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಧ್ವನಿವರ್ಧಕಗಳ ಮೂಲಕ ಹಾಗೂ ಜಾಗೃತಿ ಶಿಬಿರಗಳ ಮೂಲಕ ನೋಟಿಸ್ ಪರಿಹಾರ ಪ್ರಕ್ರಿಯೆಯ ಬಗ್ಗೆ ಸರಳವಾಗಿ ಮಾಹಿತಿ ನೀಡಬೇಕು. ಯಾವುದೇ ಅರ್ಹ ಮತದಾರ ಕೈಬಿಡದಂತೆ ಖಾತರಿ: ತಾಂತ್ರಿಕ ಕಾರಣಗಳನ್ನೇ ಮುಂದಿಟ್ಟುಕೊಂಡು ಯಾವುದೇ ನೈಜ ಹಾಗೂ ಅರ್ಹ ಮತದಾರನ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಆದುದರಿಂದ, ತಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ತಾಲೂಕುವಾರು ತಹಶೀಲ್ದಾರ್‍ಗಳು, ಚುನಾವಣಾಧಿಕಾರಿಗಳು ಹಾಗೂ ಬಿಎಲ್‍ಒಗಳ ತುರ್ತು ಸಭೆ ನಡೆಸಿ, ಮಂಡ್ಯ ಜಿಲ್ಲೆಯ 1.50 ಲಕ್ಷಕ್ಕೂ ಅಧಿಕ ಮತದಾರರ ಹಕ್ಕು ರಕ್ಷಣೆಗೆ ಸೂಕ್ತ ಮಾರ್ಗಸೂಚಿ ಹೊರಡಿಸಬೇಕಾಗಿ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.






