ಎನ್ಎಚ್ಎಂ ಯೋಜನೆಯ ಸಿಬ್ಬಂದಿಗೆ ವೇತನ ಪರಿಷ್ಕರಣೆ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಮಿಷನ್(ಎನ್ಎಚ್ಎಂ) ಯೋಜನೆಯಡಿ ಕರ್ತವ್ಯ ನಿರ್ವಹಿಸುವ ವೈದ್ಯ, ತಜ್ಞ ವೈದ್ಯ ಹಾಗೂ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಣೆ ಮಾಡಿದ್ದು, ಹೊಸದಾಗಿ ನೇಮಕವಾಗುವವರಿಗೆ ಮಾತ್ರ ವೇತನ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಎಚ್ಎಂ ಯೋಜನೆಯಡಿ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು, ವಿಶೇಷ ನವಜಾತ ಶಿಶು ಆರೈಕೆ ಘಟಕ(ಎಸ್ಎನ್ಸಿಯು) ಮತ್ತು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಕಾರ್ಯನಿರ್ವಹಿಸುವ ಸ್ಟಾಫ್ ನರ್ಸ್ಗಳ ವೇತನ ಕಡಿಮೆಯಿರುವ ಕಾರಣ ಅನೇಕ ವೈದ್ಯರ ಹುದ್ದೆಗಳು ಖಾಲಿ ಉಳಿದಿದೆ. ಹೀಗಾಗಿ ವೇತನವನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ ಎಂದರು.
ಎನ್ಎಚ್ಎಂ ಯೋಜನೆಯಡಿ ಎಂಬಿಬಿಎಸ್ ವೈದ್ಯರಿಗೆ ಪ್ರಸ್ತುತ 46,895 ರೂ.ಗಳಿಂದ 50 ಸಾವಿರ ರೂ. ನೀಡಲಾಗುತ್ತಿದ್ದು, 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ತಜ್ಞ ವೈದ್ಯರಿಗೆ 1,10,000 ರೂ.ಗಳಿಂದ 1,30,000 ರೂ.ಗಳನ್ನು ನೀಡಲಾಗುತ್ತಿದ್ದು, 1,40,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಇವರಿಗೆ ಪ್ರತಿ ವರ್ಷದ ಅನುಭವಕ್ಕೆ ಶೇ.2.5ಕ್ಕೆ ಹೆಚ್ಚಳ ಮಾಡಲಾಗುವುದು. ಸ್ಟಾಫ್ ನರ್ಸ್ಗಳ ಪ್ರಸ್ತುತ ವೇತನವು 14,186 ರೂ.ಗಳಿಂದ 18,774 ರೂ. ಇದ್ದು, 22 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಈಗ ಪಡೆಯುತ್ತಿರುವ ವೇತನ ಮಂದುವರೆಯುತ್ತದೆ. ಈ ನೌಕರರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. ಹೊಸ ನೇಮಕಾತಿ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅನುಭವದ ಆಧಾರದ ಮೇಲೆ ಆದ್ಯತೆ ನೀಡುವುದು ಎಂದು ಅವರು ವಿವರಿಸಿದರು.
ವೇತನ ಹೆಚ್ಚಳದಿಂದ ಹೆಚ್ಚಿನ ಸಂಖ್ಯೆಯ ವೈದ್ಯರು ಎನ್ಎಚ್ಎಂ ಅಡಿಯಲ್ಲಿ ನೇಮಕವಾಗುವ ಸಾಧ್ಯತೆಯಿದ್ದು, ಇದರಿಂದ ತಾಯಿ ಮಕ್ಕಳ ಆರೋಗ್ಯ, ಶಸ್ತ್ರಚಿಕಿತ್ಸೆ, ಒಳ ಹಾಗೂ ಹೊರರೋಗಿಗಳ ಸೇವೆ ಉತ್ತಮವಾಗಲಿದೆ ಎಂದು ಅವರು ತಿಳಿಸಿದರು.