ಡೆಂಗ್ಯೂ ನಿಯಂತ್ರಣಕ್ಕೆ 700 ಸ್ವಯಂ ಸೇವಕರ ನೇಮಕ : ದಿನೇಶ್ ಗುಂಡೂರಾವ್

ಬೆಂಗಳೂರು : ಡೆಂಗ್ಯೂ ತಡೆಗಟ್ಟಲು ಈ ಬಾರಿ ಬೆಂಗಳೂರಿನಲ್ಲಿ ಹೆಚ್ವಿನ ಮುನ್ನೆಚ್ಚರಿಕೆ ವಹಿಸಲು 700 ಸ್ವಯಂ ಸೇವಕರು ಹಾಗೂ 240 ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನ ನೇಮಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ನಗರದ ಪುರಭವನದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿಯೇ ಶೇ.40ರಿಂದ 50ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದ್ದು, ನಾಗರಿಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ನಮ್ಮ ಆರೋಗ್ಯಕ್ಕೆ ನಾವು ಮೊದಲ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷವಾಕ್ಯದೊಂದಿಗೆ ಡೆಂಗ್ಯೂ ಸೋಲಿಸುವ ಅಭಿಯಾನವನ್ನು ಆರೋಗ್ಯ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಸಹಯೋಗದಲ್ಲಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕ ಸ್ಥಳಗಳು, ನೀರು ನಿಲ್ಲುವ ಪ್ರದೇಶಗಳಲ್ಲಿ ಡೆಂಗ್ಯೂ ತರುವ ಸೊಳ್ಳಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕರು ಸ್ವಯಂ ಸ್ವಚ್ಚತೆಗೆ ಆದ್ಯತೆ ನೀಡಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಡೆಂಗ್ಯೂ ನಿಯಂತ್ರಣ ಮಾಡಲು ಸಾಧ್ಯ ಎಂದು ಅವರು ಕರೆ ನೀಡಿದರು.
ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಬಡಾವಣೆಯಲ್ಲಿ ಮನೆ-ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಡೆಂಗ್ಯೂ ಲಾವಾ ಉತ್ಪತ್ತಿ ತಾಣವಾದ ಶುದ್ಧ ನೀರಿನ ಘಟಕಗಳಾದ ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಹಳೆಯ ಟೈರ್‍ಗಳು, ತೆಂಗಿನ ಚಿಪ್ಪುಗಳಲ್ಲಿ ಈಡಿಸ್ ಸೊಳ್ಳೆ ಲಾವಾಗಳನ್ನು ಉತ್ಪಿಸುತ್ತದೆ. ಸಾಧ್ಯವಾದಷ್ಟು ಈ ತಾಣಗಳನ್ನು ಸುಚ್ಚಿತ್ವ ಕಾಪಾಡಿಕೊಂಡರೆ ಡೆಂಗ್ಯೂ ಸಂಪೂರ್ಣ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.







