ಅರಣ್ಯ ಇಲಾಖೆಯ ಭೂಮಿಗಳನ್ನು ‘ಕಬ್ಬನ್ ಪಾರ್ಕ್’ ರೀತಿ ಅಭಿವೃದ್ಧಿಗೆ ಧನಸಹಾಯ: ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರಿನಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಭೂಮಿಗಳನ್ನು ಕಬ್ಬನ್ ಪಾರ್ಕ್ ರೀತಿ ಅಭಿವೃದ್ದಿ ಮಾಡಲು ಅರಣ್ಯ ಇಲಾಖೆ ಮುಂದಾದರೆ ಪಾಲಿಕೆಯಿಂದ ಅಗತ್ಯ ಧನಸಹಾಯ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಬ್ಬನ್ ಪಾರ್ಕ್, ಲಾಲ್‍ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದರು.
ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎನ್ನುವುದನ್ನು ಯಾರೊಬ್ಬರು ಮರೆಯಬಾರದು. ಪ್ರಕೃತಿ ಉಚಿತವಾಗಿ ಊಟ ಕೊಡುತ್ತಿದೆ ಎಂದು ಅದನ್ನು ಕಂಠಪೂರ್ತಿ ತಿನ್ನಬಾರದು. ಭವಿಷ್ಯಕ್ಕೂ ಉಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುತ್ತಲಿನ ಪ್ರಕೃತಿ, ಮಣ್ಣು, ನೀರನ್ನು ಉಳಿಸುವ ಸಂಕಲ್ಪವನ್ನು ನಮ್ಮ ಸರಕಾರ ತೆಗೆದುಕೊಂಡಿದೆ. ಪ್ರಕೃತಿಯಿಂದ ನಾವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿಗೆ ಅದಕ್ಕೆ ವಾಪಸ್ ಕೊಡಬೇಕು. ಈ ಭೂಮಿ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಾವುಗಳು ನಮ್ಮ ಜೀವಿತಾವಧಿಯಲ್ಲಿ ಒಂದೊಂದು ಮರವನ್ನು ಬೆಳೆಸುವಂತಹ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ನಗರದ ಶಾಲೆಗಳ ವಿದ್ಯಾರ್ಥಿಗಳು ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ಯೋಜನೆ ರೂಪಿಸಿದೆವು. ಹಿಂದಿನ ವರ್ಷ ಸುಮಾರು 50 ಸಾವಿರ ಸಸಿಗಳನ್ನು ನೆಡಲಾಗಿದೆ. ಇವುಗಳನ್ನು ವಿದ್ಯಾರ್ಥಿಗಳೇ ಪೋಷಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಶಾಲೆಗಳಲ್ಲಿ ‘ಕ್ಲೈಮೆಟ್ ಆಕ್ಷನ್ ಕ್ಲಬ್’ ರಚನೆ: ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ‘ಕ್ಲೈಮೆಟ್ ಆಕ್ಷನ್ ಕ್ಲಬ್’ ರಚನೆ ಮಾಡಬೇಕೆಂದು ಸೂಚನೆ ನೀಡಿದ್ದೇವೆ. ಬೆಂಗಳೂರಿನಲ್ಲಿ 1.20 ಕೋಟಿಗೆ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ನಾವು ಆಲೋಚನೆ ಮಾಡಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.







