ಜೆಡಿಎಸ್‍ನವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ಜೆಡಿಎಸ್‍ನವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ನಮ್ಮ ಸರಕಾರ ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಿದೆ. ಆದರೆ ಜೆಡಿಎಸ್‍ಗೆ ಏನೂ ಮಾಡಲು ಆಗಿಲ್ಲ. ಹೀಗಾಗಿ ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ವಿಚಾರವಾಗಿ ರೈತರ ಜೊತೆ ಸೇರಿ ಜೆಡಿಎಸ್ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಪಾಲಿನ 30 ಟಿಎಂಸಿ ತುಂಗಭದ್ರಾ ನೀರು ಆಂದ್ರಕ್ಕೆ ಸೇರುತ್ತಿದೆ. ಚಂದ್ರಬಾಬು ನಾಯ್ಡು ಅವರು ಸಭೆಗೆ ಬರುತ್ತಿಲ್ಲ. ಮೊದಲು ಅವರಿಂದ ಒಪ್ಪಿಗೆ ಕೊಡಿಸಲಿ ಎಂದು ಹೇಳಿದರು.
ಕಸ ಗುಡಿಸುವ ಯಂತ್ರ ಬಾಡಿಗೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ಆರೋಪದ ವಿಚಾರವಾಗಿ, ಭ್ರಷ್ಟಾಚಾರ ನಡೆದಿದ್ದರೆ ಶೋಭಾ ಕರಂದ್ಲಾಜೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಥವಾ ಸೂಕ್ತ ತನಿಖಾ ಸಂಸ್ಥೆಗೆ ದೂರು ನೀಡಲಿ. ನಾನು ಕೇಂದ್ರ ಶೋಭಾ ಕರಂದ್ಲಾಜೆ ಅವರಿಗೆ ಉತ್ತರಿಸುತ್ತೇನೆಯೇ ಹೊರತು ಆತನಿಗಲ್ಲ. ಕಸ ಗುಡಿಸುವ ಯಂತ್ರಗಳ ಬಗ್ಗೆ ಅಧ್ಯಯನ ನಡೆಸಿಯೇ ಮುಂದುವರೆದಿರುವುದು. ಇದು ಕೇವಲ ಒಂದು ವರ್ಷದ ಯೋಜನೆಯಲ್ಲ, ಏಳು ವರ್ಷಗಳ ಯೋಜನೆ ಎಂದು ಅವರು ವಿವರಿಸಿದರು.
ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ. ಶೋಭಾ ಕರಂದ್ಲಾಜೆ ಅವರ ಟೀಕೆಗಳನ್ನು ನಾನು ಸ್ವಾಗತ ಮಾಡುತ್ತೇನೆ. ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ. ಈ ಮೊತ್ತ ದೊಡ್ಡದಾಗಿ ಕಾಣುತ್ತಿರಬಹುದು. ಇದು ಕೇವಲ ವಾಹನದ ವಿಚಾರವೊಂದೇ ಇಲ್ಲ. ಚಾಲಕ, ಸಹಾಯಕ, ಸ್ವಚ್ಛ ಮಾಡುವವರು ಸೇರಿದಂತೆ ಅನೇಕ ವಿಚಾರಗಳಿವೆ. ಎಲ್ಲ ಆಯಾಮಗಳಿಂದ ಆಲೋಚಿಸಿ ಸರಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದರು.







