ಡಿ.8ರ ಸರ್ವಪಕ್ಷ ಸಭೆ ಮುಂದೂಡಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್

ದೆಹಲಿ: "ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.
ಸರ್ವಪಕ್ಷಗಳ ಸಭೆಯ ಬಗ್ಗೆ ಕೇಳಿದಾಗ, "ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರಿಗೆ ಪರಿಶೀಲನಾ ಸಭೆ ಇರುವ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಗೆ ಸಂಸತ್ ನಲ್ಲಿ ಬಿಲ್ ಮಂಡನೆ ಮಾಡಬೇಕಾದ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಾನು ಪ್ರಹ್ಲಾದ್ ಜೋಶಿ ಅವರ ಬಳಿ ಮಾತನಾಡಿದೆ. ಆಗ ಅವರು ಪ್ರಧಾನಿಯವರು ಭಾಗವಹಿಸುವ ಕಾರಣಕ್ಕೆ ಆಗುವುದಿಲ್ಲ ಎಂದಿದ್ದಾರೆ" ಎಂದರು.
ಸಿದ್ದರಾಮಯ್ಯ ಅವರು ತೊಟ್ಟಿದ್ದ ವಾಚ್ ನ ಬೆಲೆ 43 ಲಕ್ಷ ಎಂದು ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, "ಯಾರು ಹೇಳಿದ್ದು ಆ ವಾಚಿನ ಬೆಲೆ 43 ಲಕ್ಷ ಎಂದು. ನಾನು 7-8 ವರ್ಷದ ಹಿಂದೆ ತೆಗೆದುಕೊಂಡಾಗ 24 ಲಕ್ಷದಷ್ಟಿತ್ತು. ಅದು ಹೇಗೆ 43 ಲಕ್ಷವಾಗುತ್ತದೆ. ಉಪಹಾರ ಸಭೆಯ ದಿನ ನಾವಿಬ್ಬರು ಕಾಕತಾಳೀಯವಾಗಿ ಒಂದೇ ಕಂಪೆನಿಯ ವಾಚ್ ಧರಿಸಿದ್ದೇವೆ ಎಂದು ಆನಂತರ ತಿಳಿಯಿತು" ಎಂದರು.
ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನು ಬೀಗತನ ಎಂದು ಕೆ.ಎನ್.ರಾಜಣ್ಣ ಅವರು ಕರೆದಿರುವ ಬಗ್ಗೆ ಕೇಳಿದಾಗ "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದರು. ನಾನು ಅವರ ಹುಟ್ಟುಹಬ್ಬದ ದಿನ ಹೋಗಿದ್ದೆ. ಹಾಗಾದರೆ ನಮ್ಮದೂ ಬೀಗತನ ತಾನೇ?" ಎಂದು ಪ್ರಶ್ನಿಸಿದರು.







