ವಾಚ್ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ರಾಜೀನಾಮೆ ನೀಡುವೆ : ಡಿ.ಕೆ.ಶಿವಕುಮಾರ್ ಸವಾಲು

ಬೆಂಗಳೂರು : ನಾನು ನನ್ನ ಗಡಿಯಾರದ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ ನೀಡುವೆ, ಇಲ್ಲವಾದರೆ ಅವರು ರಾಜೀನಾಮೆ ನೀಡುತ್ತಾರಾ? ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಡಿ.ಕೆ.ಶಿವಕುಮಾರ್ ಧರಿಸಿರುವ ವಾಚ್ ಕಳುವು ಮಾಡಿರುವುದೋ ಅಥವಾ ಖರೀದಿ ಮಾಡಿರುವುದೊ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ನಾರಾಯಣಸ್ವಾಮಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.
ನಾನು ಪ್ರದರ್ಶಿಸಿರುವ ದಾಖಲೆ ವಿಚಾರ ಒತ್ತಟ್ಟಿಗೆ ಇರಲಿ, ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು ಎಂದು ಶಿವಕುಮಾರ್ ತಿಳಿಸಿದರು.
2018 ಹಾಗೂ 2023ರ ಚುನಾವಣಾ ಪ್ರಮಾಣಪತ್ರದಲ್ಲಿ ವಾಚ್ ಕುರಿತು ಮಾಹಿತಿ ತೋರಿಸಿಲ್ಲ ಎಂಬುದು ಅವರ ವಾದ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಅವರಿಗೇನು ಗೊತ್ತು? 2025ರಲ್ಲೂ ಮಾಹಿತಿ ಸಲ್ಲಿಕೆ ಮಾಡಿದ್ದೀನಲ್ಲಾ? ಎಂದು ತಿಳಿಸಿದರು.
ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತಾರಂತೆ ಎಂದು ಕೇಳಿದಾಗ, ಸದನದಲ್ಲೂ ಪ್ರಸ್ತಾಪಿಸಲಿ, ಬೇರೆ ಎಲ್ಲಾದರೂ ಪ್ರಸ್ತಾಪಿಸಲಿ. ಯಾರು ಬೇಡ ಎನ್ನುತ್ತಾರೆ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್ ಕದ್ದಿದ್ದೇನೆ ಎಂದು ಹೇಳಿದ್ದಾರಲ್ಲ ಅದಕ್ಕೆ ತೋರಿಸಿರುವೆ ಎಂದು ತಿರುಗೇಟು ನೀಡಿದರು.







