ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನ್ಯಾಷನಲ್ ಹೆರಾಲ್ಡ್ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಇಡಿ ಕೇಸ್ ಹಾಗೂ ನರೇಗಾ ಯೋಜನೆ ಹೆಸರು ಬದಲಾವಣೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರು ಕೈಬಿಟ್ಟು ಅವಮಾನ’ ಮಾಡಿರುವುದನ್ನು ಖಂಡಿಸಿ ನಡೆದ ‘ಸತ್ಯಮೇವ ಜಯತೆ-ಪ್ರತಿಭಟನಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಈ ದೇಶದ ಸ್ವಾತಂತ್ರ್ಯದ ನಾಯಕತ್ವ ವಹಿಸಿದ ಮಹಾತ್ಮಾ ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಕನ್ನಡ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯದ ಬುನಾದಿ ಹಾಕಿದರು. ಇದಕ್ಕಾಗಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು ಎಂದು ಅವರು ಹೇಳಿದರು.
ಮಹತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ಸರಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಭೂಮಿ ಮಟ್ಟ ಮಾಡಲು, ಕೊಟ್ಟಿಗೆ ನಿರ್ಮಾಣ, ಆಶ್ರಯಮನೆ ನಿರ್ಮಾಣ ಮಾಡಲು ಸರಕಾರ ಕೂಲಿ ನೀಡುತ್ತದೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ತಂದ ಈ ಯೋಜನೆಯಲ್ಲಿ ಈ ಸರಕಾರ ಗಾಂಧೀಜಿ ಅವರ ಹೆಸರು ತೆಗೆಯುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕುತ್ತೇನೆ. ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ನೀವು ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಬೇರೆ ದೇಶದ ನಾಯಕರು ನಮ್ಮ ದೇಶಕ್ಕೆ ಬಂದರೆ ಮೊದಲು ಅವರು ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾರೆ. ಗಾಂಧಿ ಭಾವಚಿತ್ರಕ್ಕೆ ನಮಿಸುತ್ತಾರೆ. ಆದರೆ ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ ಎಂದು ಅವರು ಹೇಳಿದರು.
ನ್ಯಾಷನಲ್ ಹೆರಾಲ್ಡ್ ದೇಶದ ಆಸ್ತಿ. ದ್ವೇಷ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ. ಇಂದು ಸತ್ಯಮೇವ ಜಯತೆ ಎಂದು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಗೆ ಘನತೆ ಇಲ್ಲದೆ ಬದುಕುತ್ತಿದ್ದಾರೆ. ಪಿತೂರಿಯಿಂದ ಸೋಲಿಸಲು, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ದೇಶದ ಭವಿಷ್ಯ ರೂಪಿಸಲು ಸಂವಿಧಾನದ ರೂಪದಲ್ಲಿ ಕಾರ್ಯಕ್ರಮಗಳನ್ನು ಕೊಟ್ಟುಕೊಂಡು ಬಂದಿದೆ ಎಂದು ಅವರು ತಿಳಿಸಿದರು.
ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಪೋಲೀಸ್ ಠಾಣೆ, ಕೋರ್ಟ್ ಜೈಲು ಸುತ್ತುವಂತೆ ಮಾಡಿದರು. ನಂತರ ನನ್ನ ಮೇಲಿನ ಪ್ರಕರಣ ವಜಾಗೊಂಡಿತು. ಅದೇ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ದಾಖಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಅವರು ಇಲ್ಲಿಗೆ ನಿಲ್ಲಿಸುವುದಿಲ್ಲ. ಮೊನ್ನೆ ಹೊಸದಾಗಿ ಎಫ್‍ಐಆರ್ ದಾಖಲಿಸಿ ನೋಟೀಸ್ ನೀಡಿದ್ದಾರೆ. ಅವರ ವಿಚಾರಣೆಗೆ ಹಾಜರಾಗಲು ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಅವರಿಗೆ ಎಫ್‍ಐಆರ್ ಪ್ರತಿ ನೀಡುವಂತೆ ಕೇಳಿದ್ದೇನೆ ಎಂದು ಅವರು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾನು ಹಾಗೂ ನನ್ನ ಸಹೋದರ ಡಿ.ಕೆ. ಸುರೇಶ್ ದೇಣಿಗೆ ನೀಡಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರು ಕೊಡಿಸಿದ್ದಾರೆ. ನಮ್ಮೆಲ್ಲರಿಗೂ ನೋಟೀಸ್ ನೀಡಿದ್ದಾರೆ. ನಾವು ಇದನ್ನು ಎದುರಿಸುತ್ತೇವೆ. ನಾವೆಲ್ಲರೂ ಕಾಂಗ್ರೆಸಿಗರು. ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಉಳಿಸಿಕೊಳ್ಳಲು ಸುಮಾರು 100 ಕೋಟಿ ರೂ.ಯಷ್ಟು ಹಣವನ್ನು ಕಾಂಗ್ರೆಸಿಗರು ನೀಡಿದರು. ಈ ಹಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಖಾತೆಗೆ ಹಣ ಹೋಗಿಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಬಿ.ವಿ. ಶ್ರೀನಿವಾಸ್, ಶಾಸಕರಾದ ಪ್ರದೀಪ್ ಈಶ್ವರ್, ಹರಿಪ್ರಸಾದ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಮುಖಂಡರಾದ ಎಚ್.ಎಂ. ರೇವಣ್ಣ, ಮೋಟಮ್ಮ, ರಾಣಿ ಸತೀಶ್, ಬಿ.ಎಲ್. ಶಂಕರ್, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.







