ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ; ಗೃಹಲಕ್ಷ್ಮೀ, ಗೃಹಜ್ಯೋತಿ ಫಲಾನುಭವಿಗಳಿಗೂ ಸಿಎಂ ಶುಭ ಹಾರೈಕೆ

ಬೆಂಗಳೂರು : ರಾಜ್ಯದ ಸಮಸ್ತ ಜನರಿಗೆ ಹಾಗೂ ಗ್ಯಾರಂಟಿ ಯೋಜನೆಗಳ ಎಲ್ಲ ಫಲಾನುಭವಿಗಳಿಗೆ ಸರಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ರವಿವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಯ ಮೂಲಕ ರಾಜ್ಯದ ಕೋಟ್ಯಂತರ ಮನೆಗಳಲ್ಲಿ ಬೆಳಕು ಮೂಡುತ್ತಿದೆ. ಇದೇ ಬೆಳಕಿನಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ರಾಜ್ಯದ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತೋಷದ ಬೆಳಕು ತುಂಬಲಿ. ಎಲ್ಲ ಕುಟುಂಬಗಳಲ್ಲಿ ಸಂತಸ ಹಾಗೂ ನೆಮ್ಮದಿ ನೆಲೆಸಲಿ’ ಎಂದು ಹಾರೈಸಿದರು.
ಹಬ್ಬಗಳು ನಾಡಿನ ಪ್ರತಿಯೊಂದು ಕುಟುಂಬಕ್ಕೂ ಹೊಸ ಭರವಸೆ. ಗೌರಿ-ಗಣೇಶ ಹಬ್ಬ ಒಂದೇ ದಿನ ಬಂದಿದೆ. ವಿಘ್ನ ವಿನಾಯಕನ ಆಶೀರ್ವಾದದಿಂದ ಜನರ ಸಂಕಷ್ಟಗಳು ದೂರವಾಗಿ, ಸುಖ-ಶಾಂತಿ ನೆಲೆಸಲಿ. ಗಣೇಶನಿಗಿಂತ ಮೊದಲು ಗೌರಿಯನ್ನು ಪೂಜಿಸುತ್ತೇವೆ. ಗೌರಿ ಸಮಾನರಾದ ರಾಜ್ಯದ ಎಲ್ಲ ತಾಯಂದಿರಿಗೂ ಹಬ್ಬದ ಶುಭಾಶಯಗಳು ಎಂದು ಡಿ.ಕೆ.ಶಿವಕುಮಾರ್ ಕೋರಿದರು.




