ಸರಕಾರ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ಎಲ್ಲ ಜಾತಿ, ಧರ್ಮದ ಮಠಗಳು ಎಲ್ಲ ಜಾತಿ-ವರ್ಗಗಳನ್ನು ಪ್ರೊತ್ಸಾಹಿಸಿ ಬೆಳೆಸಬೇಕು, ಎಲ್ಲ ಸಮಾಜಗಳನ್ನೂ ಒಗ್ಗೂಡಿಸಬೇಕು. ಬಸವಣ್ಣ ಸೇರಿದಂತೆ ನೂರಾರು ಮಠಾಧೀಶರು ಕೊಟ್ಟಂತ ಧರ್ಮದ ಹಾದಿಯಲ್ಲಿ ನಾವು-ನೀವೆಲ್ಲ ಸೇರಿ ನಡೆಯಲು ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ರವಿವಾರ ನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯು ಏರ್ಪಡಿಸಿದ್ದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಮಠಗಳಿಗೂ ಜಾತಿ ಬೇಕು. ಧರ್ಮ ಬೇಡವೆಂದು ನಾವು ಬಿಟ್ಟರೂ ಅದು ನಮ್ಮನ್ನು ಬಿಡುವುದಿಲ್ಲ, ಅನಿವಾರ್ಯವಾಗುತ್ತದೆ. ಆದರೆ ಮಾನವ ಧರ್ಮದ ಪ್ರತಿಪಾದನೆಯಿಂದ ಮಾತ್ರ ಮಠಗಳಿಗೆ ಶಕ್ತಿ ಬರುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವವನ್ನು ಯಾವತ್ತೂ ಬಿಡಬಾರದು. ಅನುಸರಣೆಯಿಂದ ಮುಂದುವರಿಯಬೇಕು ಎಂದರು.
ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕೊಟ್ಟ ಬಸವಣ್ಣನರ ಭಾವಚಿತ್ರವನ್ನು ರಾಜ್ಯ ಸರಕಾರವು ಸರಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದೆ. ಎಲ್ಲ ಸಮುದಾಯದ ಮಠಗಳು ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲ ಮಠಗಳೂ ಕೊಡುಗೆ ನೀಡುತ್ತಿವೆ. ನಾನು ಬಸವಣ್ಣನವರ ಅರಿವಿನ ಹಾದಿಯಲ್ಲಿ ಸರಕಾರದ ಜವಾಬ್ದಾರಿಯನ್ನು ಹೊತ್ತುಕೊಂಡು ಒಬ್ಬ ಪ್ರಜಾಸೇವಕನಾಗಿ ಮುಂದೆ ನಡಿಯುತ್ತಿದ್ದೇನೆ. ಸರಕಾರ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದೆ. ಬಸವಣ್ಣರನ್ನು ‘ಸಾಂಸ್ಕೃತಿಕ ನಾಯಕ' ಎಂದು ಘೋಷಣೆ ಮಾಡಿದ್ದು ನಮ್ಮ ಸರಕಾರ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಹುಟ್ಟಿನಿಂದ ಒಕ್ಕಲಿಗನಾದ ನನಗೆ, ಅರಿವು ಕೊಟ್ಟವರು ಲಿಂಗಾಯತ ಸಮುದಾಯದ ವೀರ ಗಂಗಾಧರ ಅಜ್ಜಯ್ಯನವರು. ಅವರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪಮಾಣವಚನ ಸ್ವೀಕರಿಸಿದಾಗ ಬೇಕಾದಷ್ಟು ಟೀಕೆಗಳು ಬಂತು, ಕೆಲವರಿಗೆ ಮೆಚ್ಚುಗೆ ಆಯಿತು. ದೇಶದ ಮೊದಲನೆ, ಎರಡನೇ ಪ್ರಜೆಯಾದಿಯಾಗಿ ಕುತೂಹಲದಿಂದ ಕೇಳಿದ್ದರು. ನನ್ನ ನಂಬಿಕೆಯ ಕುರಿತು ಅವರೆಲ್ಲರಿಗೂ ವಿವರಿಸಿದ್ದೇನೆ. ಇದು ಗುಪ್ತವಾದ ನಿಮ್ಮ ನಂಬಿಕೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್, ಶಾಸಕ ಗಣೇಶ್ ಹುಕ್ಕೇರಿ, ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿ, ರಂಭಾಪುರಿ ಮಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮಿ, ಉಜ್ಜಯಿನಿ ಪೀಠದ ಸಿದ್ದಲಿಂಗ ಸ್ವಾಮಿ, ಶ್ರೀಶೈಲ ಪೀಠದ ಚೆನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮಿ, ಕಾಶಿ ಮಠದ ಚಂದ್ರಶೇಖರ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ʼಸ್ವಾಮೀಜಿಗಳು ಬೆಂಗಳೂರಿಗೆ ಬಂದಾಗ ವಾಸ್ತವ್ಯಕ್ಕಾಗಿ ಹತ್ತಾರು ಮಠಗಳಿಗೆ ಜಾಗ ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಇದೆ. ನಿಮ್ಮ ಮನವಿಯ ಮೇರೆಗೆ, ಕಟ್ಟಡ ನಿರ್ಮಿಸಲು ಸದ್ಯದಲ್ಲೇ ಹೊರವಲಯದಲ್ಲಿ ಎರಡು ಎಕರೆ ಮಂಜೂರು ಮಾಡಲು ಜಾಗ ಹುಡುಕಿಸಿ ಕೊಡುತ್ತೇನೆ. ಪುನಃ ಕಟ್ಟಡ ನಿರ್ಮಾಣಕ್ಕೂ ಮತ್ತೆ ಸರಕಾರದಿಂದ ಅನುದಾನ ಕೇಳಬಾರದು. ನೀವು ವೀರಗಂಗಾಧರ ಅಜ್ಜ ಹೆಸರನ್ನು ಇಡುತ್ತೀರೋ ಅಥವಾ ಬೇರೆ ಯಾರ ಹೆಸರನ್ನು ಇಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ಮಠಗಳು ನುಡಿದಂತೆ ನಡೆಯಬೇಕು. ಅದು ಎಲ್ಲ ಮಠಗಳ ಸ್ವತ್ತಾಗಬೇಕು. ಎಲ್ಲರದ್ದೂ ಪಾಲಿರಬೇಕು’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ






