ಮಹಿಳಾ ಮೀಸಲಾತಿಯ ಪರಿಣಾಮಕಾರಿ ಜಾರಿ, ರಾಜಕೀಯ ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತು ಅಗತ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ವಲಯದ ಸಮ್ಮೇಳನದ ಲಾಂಛನ ಅನಾವರಣ

ಬೆಂಗಳೂರು : ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಮಹಿಳಾ ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ರಾಜಕೀಯ ಹಾಗೂ ಆಡಳಿತದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ನ.17 ಹಾಗೂ 18 ರಂದು ನಡೆಯಲಿರುವ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ (ಸಿಡಬ್ಲ್ಯೂಪಿ) ಭಾರತೀಯ ಪ್ರಾದೇಶಿಕ ವಲಯದ ಸಮ್ಮೇಳನದ ಲಾಂಛನ (ಲೋಗೋ)ವನ್ನು ಶನಿವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಇದು ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಈ ಹಿಂದೆ ರಾಜೀವ್ ಗಾಂಧಿ ಅವರು ಪಂಚಾಯತ್ ನಿಂದ ಹಿಡಿದು ಜಿಲ್ಲಾ ಆಡಳಿತದವರೆಗೆ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ತಂದಿದ್ದರು ಎಂದು ಅವರು ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಪರವಾಗಿವೆ ಎಂಬುದು ನನ್ನ ಅಭಿಪ್ರಾಯ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾಬಲ್ಯ ಸಂತೋಷಕರ ಸಂಗತಿ. ನಮ್ಮ ರಾಜ್ಯದ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ವಿಧಾನಸಭೆ ಕಾರ್ಯದರ್ಶಿ, ವಿಧಾನಪರಿಷತ್ ಕಾರ್ಯದರ್ಶಿ ಹಾಗೂ ಉಪಸಭಾಪತಿ ಸ್ಥಾನದಲ್ಲಿ ಮಹಿಳೆಯರೇ ಇದ್ದಾರೆ ಎಂದು ಅವರು ಹೇಳಿದರು.
ಸಿಡಬ್ಲ್ಯೂಪಿ ಸಮ್ಮೇಳನ ಐತಿಹಾಸಿಕ ಮೈಲಿಗಲ್ಲು: ನವೆಂಬರ್ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊಟ್ಟಮೊದಲ ಸ್ವತಂತ್ರ ಕಾಮನ್ವೆಲ್ತ್ ಮಹಿಳಾ ಸಂಸದರ(ಸಿಡಬ್ಲ್ಯೂಪಿ) ಭಾರತೀಯ ಪ್ರಾದೇಶಿಕ ವಲಯದ ಸಮ್ಮೇಳನಕ್ಕೆ ರಾಜ್ಯ ಸರಕಾರವು ವಿಧಾನಸಭಾ ಸ್ಪೀಕರ್ ಜಿ.ಎಸ್.ಪಾಟೀಲ್ ಮತ್ತು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ಮೂಲಕ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಸಿಡಬ್ಲ್ಯೂಪಿ ಭಾರತ ವಲಯದ ಅಧ್ಯಕ್ಷೆ ಡಿ.ಪುರಂದೇಶ್ವರಿ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಕರ್ನಾಟಕದ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ. ಈ ಸಮಾವೇಶದಲ್ಲಿ ದೇಶ ಮತ್ತು ವಿದೇಶಗಳ ಸುಮಾರು 150ಕ್ಕೂ ಹೆಚ್ಚು ಮಹಿಳಾ ಸಂಸದರು, ಶಾಸಕರು ಹಾಗೂ ಸಭಾಧ್ಯಕ್ಷರು ಪಾಲ್ಗೊಳ್ಳಲಿದ್ದು, ದೇಶದ ಅಭಿವೃದ್ಧಿ ಮತ್ತು ಮಹಿಳಾ ಹಕ್ಕುಗಳ ರಕ್ಷಣೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ನೆಹರು ಮತ್ತು ಇಂದಿರಾ ಗಾಂಧಿ ಸ್ಮರಣೆ: ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ ನೆಹರು ಅವರ ಆಶಯದಂತೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಲ್ಲದೆ, ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆಗಳು ಅಪಾರ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರುಗಳೇ ಸಾಕ್ಷಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಉಪಸಭಾಪತಿ ಡಾ.ಉಮಾಶ್ರೀ, ವಿಧಾನ ಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು, ವಿಧಾನಸಭೆಯ ಕಾರ್ಯದರ್ಶಿ ಎಂ.ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
‘ಮಹಿಳೆಯರು ಶಾಸನಸಭೆಗಳಿಗೆ ಆಯ್ಕೆಯಾಗುವುದಷ್ಟೇ ಅಲ್ಲ, ನೀತಿ ನಿರೂಪಣೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿಯೂ ಪರಿಣಾಮಕಾರಿಯಾಗಿ ಭಾಗವಹಿಸಬೇಕು. ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವಿಗಳ ಮಾರ್ಗದರ್ಶನ ಹಾಗೂ ಡಿಜಿಟಲ್ ಸುರಕ್ಷತೆಯ ಅರಿವು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಸಮ್ಮೇಳನ ಮಹತ್ವದ್ದಾಗಿದೆ’
ಡಾ.ಡಿ.ಪುರಂದೇಶ್ವರಿ, ಅಧ್ಯಕ್ಷೆ ಸಿಡಬ್ಲ್ಯೂಪಿ ಭಾರತ ವಲಯ
‘ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆತರುವ ಈ ಸಮ್ಮೇಳನಕ್ಕೆ ಕರ್ನಾಟಕ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳೆಯರ ರಾಜಕೀಯ ಪ್ರಾತಿನಿಧ್ಯ, ಶಾಸನಾತ್ಮಕ ಸಾಮಥ್ರ್ಯ ಹಾಗೂ ನಾಯಕತ್ವವನ್ನು ಬಲಪಡಿಸಲು ಇದು ಮಹತ್ವದ ಅವಕಾಶವಾಗಿದೆ’
-ಜಿ.ಎಸ್.ಪಾಟೀಲ್, ಸ್ಪೀಕರ್, ವಿಧಾನಸಭೆ
‘ಇಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಹತ್ವದ ಸಮ್ಮೇಳನಕ್ಕೆ ಪ್ರತ್ಯೇಕ ಲಾಂಛನವನ್ನು ರೂಪಿಸಿ, ವಿಶಿಷ್ಟ ಗುರುತು ನೀಡುವ ಅವಕಾಶ ಕರ್ನಾಟಕಕ್ಕೆ ದೊರೆತಿರುವುದು ಹೆಮ್ಮೆಯ ಸಂಗತಿ. ಮಹಿಳಾ ನಾಯಕತ್ವ, ಏಕತೆ ಮತ್ತು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಸಶಕ್ತ ಧ್ವನಿಯನ್ನು ಈ ಲಾಂಛನ ಪ್ರತಿಬಿಂಬಿಸುತ್ತದೆ. ಸೈಬರ್ ಸುರಕ್ಷತೆ ಹಾಗೂ ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡುವ ಸಮ್ಮೇಳನದ ಆಶಯ ಅತ್ಯಂತ ಪ್ರಸ್ತುತವಾಗಿದೆ’
-ಸಲೀಂ ಅಹ್ಮದ್, ಸಭಾಪತಿ, ವಿಧಾನಪರಿಷತ್
ನ.17ರಂದು ಸಮ್ಮೇಳನ ಉದ್ಘಾಟನೆ: ಭಾರತ ಸಂಸತ್ತು ಹಾಗೂ ಕರ್ನಾಟಕ ವಿಧಾನಮಂಡಲದ ಸಹಯೋಗದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ನ.17ರಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ‘ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಸೈಬರ್ ಸುರಕ್ಷತೆ ಮತ್ತು ಮಾರ್ಗದರ್ಶನದ ಹಾದಿಗಳು’ ಎಂಬ ಆಶಯದಡಿ ಎರಡು ದಿನಗಳ ಸಮ್ಮೇಳನ ನಡೆಯಲಿದೆ. ಮಹಿಳಾ ಜನಪ್ರತಿನಿಧಿಗಳ ಸೈಬರ್ ಸುರಕ್ಷತೆ, ಆನ್‍ಲೈನ್ ಕಿರುಕುಳ, ಡೀಪ್‍ಫೇಕ್ ತಂತ್ರಜ್ಞಾನದ ದುರ್ಬಳಕೆ ಹಾಗೂ ನೂತನ ಜನಪ್ರತಿನಿಧಿಗಳಿಗೆ ಅನುಭವಿಗಳ ಮಾರ್ಗದರ್ಶನ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.






