ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ

ಡಿ.ಕೆ.ಶಿವಕುಮಾರ್(PTI)
ಬೆಂಗಳೂರು, ಜೂ.3: ರಾಜ್ಯದ ಮುಖ್ಯಮಂತ್ರಿಯಾಗಿ ಸಂಜೆ 4 ಗಂಟೆಗೆ ಲೋಕಭವನದಲ್ಲಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ರ ಪ್ರಮಾಣ ವಚನ ಕಾರ್ಯಕ್ರಮ ರಾಜ್ಯದ 230 ಸರಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರಗೊಳ್ಳಲಿದೆ.
ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 4:05ಕ್ಕೆ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಮತ್ತು ಮಹತ್ವದ ಕ್ಷಣವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ರಾಜ್ಯದ ಆಯ್ದ 230 ಸರಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ‘ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್’ಸಂಸ್ಥೆಯ ಸಹಯೋಗದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಾದ್ಯಂತ ಇರುವ ಪ್ರಮುಖ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಡಿಸ್ ಪ್ಲೇ ಪರದೆಗಳ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಪೂರ್ಣ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ..
ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಸಾಮಾನ್ಯ ಜನರು ಈ ಐತಿಹಾಸಿಕ ಸಮಾರಂಭದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಈ ತಂತ್ರಜ್ಞಾನ ಆಧಾರಿತ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.






