ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಶೂನ್ಯ ಕೊಡುಗೆ : ಡಿಸಿಎಂ ಡಿ.ಕೆ.ಶಿವಕುಮಾರ್
"ಕೇಂದ್ರ ಸಚಿವರು, ರಾಜ್ಯದ ಸಂಸದರು ಈ ಅನ್ಯಾಯಕ್ಕೆ ಉತ್ತರಿಸಬೇಕು"

ಡಿ.ಕೆ.ಶಿವಕುಮಾರ್
ನವದೆಹಲಿ: "ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಏನು ಕೊಡುಗೆ ಸಿಕ್ಕಿದೆ ಎಂದು ಕೇಂದ್ರ ಮಂತ್ರಿಗಳು, ರಾಜ್ಯದ ಬಿಜೆಪಿ ಸಂಸದರು ಉತ್ತರ ನೀಡಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹರಿಹಾಯ್ದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಅವರು ಪ್ರತಿಕ್ರಿಯೆ ನೀಡಿದರು.
"ನಮ್ಮ ರಾಜ್ಯದ ಶಾಸಕರಿಂದ ಆಯ್ಕೆಯಾದ ನಿರ್ಮಲ ಸೀತಾರಾಮನ್ ಅವರು ಇಷ್ಟೊಂದು ನಿರಾಸೆ ಉಂಟು ಮಾಡುತ್ತಾರೆ ಎಂದು ಭಾವಿಸಿರಲಿಲ್ಲ. ಇಡೀ ದೇಶದಲ್ಲಿಯೇ ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಐಟಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ. ಯಾವುದೇ ಚುನಾವಣೆಗಳು ಹತ್ತಿರವಿಲ್ಲದ ಕಾರಣಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಅನ್ನಿಸುತ್ತದೆ. ರಾಜ್ಯಕ್ಕೆ ಏನಾದರು ಲಾಭ ಆಗಿದೆಯೇ ಎಂದು ರಾಜ್ಯವನ್ನು ಪ್ರತಿನಿಧಿಸುವವರು ಹೇಳಬೇಕು" ಎಂದು ತಿವಿದರು.
"12 ಲಕ್ಷ ಆದಾಯ ಮಿತಿ ಇರುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಕಡಿಮೆ ಜನಕ್ಕೆ ಲಾಭವಾಗಲಿದೆ. ದೇಶದ ಶೇ. 5 ರಷ್ಟು ಜನ, ಸರ್ಕಾರಿ ಉದ್ಯೋಗ ಇರುವವರು ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ತೆರಿಗೆ ಸ್ಲಾಬ್ ಅನ್ನೇ ತೆಗೆದು ಹಾಕಬೇಕಾಗಿತ್ತು, ಅದು ಆಗಿಲ್ಲ. ಬಜೆಟ್ ಓದಬೇಕಿತ್ತು ಅದಕ್ಕೆ ಓದಿದ್ದಾರೆ" ಎಂದರು.
"ನಾನು ಇತರೆ ರಾಜ್ಯಗಳ ಅನುದಾನದ ವಿಚಾರ ಚರ್ಚೆ ಮಾತನಾಡುವುದಿಲ್ಲ. ಕಳೆದ ಬಾರಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಮಾಡಿದ್ದರು. ಇದನ್ನು ಕೊಟ್ಟರೆ? ಅದೇ ರೀತಿ ಬೇರೆ ರಾಜ್ಯಗಳಿಗೂ ಆಗಬಹುದು. ಇದು ಸಂಪೂರ್ಣ ರಾಜಕೀಯ ನಿರ್ಧಾರ. ನಾವು ಈ ಮೊದಲೇ ಪ್ರಧಾನಮಂತ್ರಿಗಳಿಗೆ ಹಾಗೂ ವಿತ್ತ ಸಚಿವರಿಗೆ ಕರ್ನಾಟಕದ ಅವಶ್ಯಕತೆಗಳ ಬಗ್ಗೆ ಮನವಿ ಮಾಡಿದ್ದೆವು" ಎಂದು ಅಸಮಾಧಾನ ವ್ಯಕ್ತಪಡಿಸಿದರು.







