ಒಂದೆರಡು-ಮೂರು ಕಂಪೆನಿಗಳನ್ನು ರಕ್ಷಣೆ ಮಾಡಬೇಕೆಂದು ಬೆಲೆ ಏರಿಕೆ ಮಾಡಿದ್ದಾರೆ : ಪ್ರಧಾನಿ ಮೋದಿ ವಿರುದ್ದ ಡಿ.ಕೆ.ಸುರೇಶ್ ಆಕ್ರೋಶ

ಬೆಂಗಳೂರು : ಸಮೃದ್ಧ, ಶಕ್ತಿಯುತವಾಗಿದ್ದ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿಯವರೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಸೋಮವಾರ ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿರಂತರ ಯುದ್ಧಗಳು ಮತ್ತು ಜಾಗತಿಕ ಅಸ್ಥಿರತೆಯು ದಶಕಗಳ ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ದೊಡ್ಡಜನಸಂಖ್ಯೆಯನ್ನು ಮತ್ತೆ ಬಡತನಕ್ಕೆ ತಳ್ಳಬಹುದು ಎನ್ನುವ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕು. ಅವರು ಯಾವ ಅರ್ಥದಲ್ಲಿ ಬಡತನದ ಬಗ್ಗೆ ಹೇಳಿದ್ದಾರೆ. ಈ ಎಲ್ಲ ವಿಚಾರಗಳ ಕುರಿತು ಜನರಿಗೆ ಮಾಹಿತಿ ಕೊಡಬೇಕು ಎಂದು ಆಗ್ರಹಿಸಿದರು.
ದೇಶದ ಚುಕ್ಕಾಣಿಯನ್ನು ಮೋದಿ ಹಿಡಿದು 12 ವರ್ಷವಾಗಿದೆ. ಈ ಹಿಂದಿನ ಆಡಳಿತಕ್ಕೆ ಹೋಲಿಸಿದಾಗ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಸುಮಾರು 45ಲಕ್ಷ ಕೋಟಿ ರೂ.ಹಣ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಪಡೆದಿದ್ದಾರೆ. ಒಂದೆರಡು-ಮೂರು ಕಂಪೆನಿಗಳಿಗೆ ರಕ್ಷಣೆ ಮಾಡಬೇಕೆಂದು ಬೆಲೆ ಏರಿಕೆ ಮಾಡಿದ್ದಾರೆ. ಜನರನ್ನು ನೀವು, ಬಡತನದ ದವಡೆಗೆ ಸಿಲುಕುವಿರಿ ಎನ್ನುವ ಸಂದೇಶ ನೀಡಿರುವುದು ನೋಡಿದರೆ ನಾವೆಲ್ಲರೂ ತಲೆ ತಗ್ಗಿಸುವಂತಹ ವಿಚಾರ ಎಂದು ಹೇಳಿದರು.
‘ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡಿದಾಗ ದೇಶದ್ರೋಹಿ ಎನ್ನುತ್ತಾರೆ. ಸ್ವತಃ ಪ್ರಧಾನಿ ಮೋದಿ ವಿದೇಶಿ ನೆಲದಲ್ಲಿ ನಿಂತು ಬಡತನ ಎದುರಾಗಿದೆ ಎಂದು ಮಾತನಾಡಿದ್ದಾರೆಂದಾಗ, ಯಾವ ದೃಷ್ಟಿಕೋನದಲ್ಲಿ ಅವರು ಹೇಳಿದ್ದಾರೆಂಬ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ಭಾರತೀಯರಿಗೆ ವಿದೇಶದಿಂದ ಸಂದೇಶ ಕೊಟ್ಟರೇ? ಎಂಬುದನ್ನು ಮೋದಿ ಹೇಳಬೇಕು’ ಎಂದು ಅವರು ತಿರುಗೇಟು ನೀಡಿದರು.
ದೇಶದ ಆರ್ಥಿಕ ಶಕ್ತಿ ಆರನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಬಿಜೆಪಿಯವರ ಮೌನ ವಹಿಸಿದ್ದು, ಏನನ್ನೂ ಬೇಕಾದರೂ ಅವರು ಉಲ್ಟಾ ಹೇಳುತ್ತಾರೆ. ಬಿಜೆಪಿಯವರು ಏನೇ ಮಾಡಿದರೂ ಅಪಚಾರ ಆಗುವುದಿಲ್ಲ. ಕಾಂಗ್ರೆಸ್‍ನವರು ಮಾಡಿದರೆ ಮಾತ್ರ ಅದು ಅನಾಚಾರ ಆಗುತ್ತದೆ. ಬಂಗಾಳದಲ್ಲಿ ಸುವೆಂದು ಅಧಿಕಾರಿ ಮೇಲೆ ಇವರೇ ಆರೋಪ ಮಾಡಿದ್ದರು. ಇದೀಗ ವಾಷಿಂಗ್ ಮೆಷಿನ್‍ಗೆ ಹಾಕಿ ಶುದ್ದ ಮಾಡಿದರು ಎಂದು ಸುರೇಶ್ ಲೇವಡಿ ಮಾಡಿದರು.
ನೀಟ್ ಪರೀಕ್ಷೆ ಜಾರಿಗೆ ತಂದ ಸಂದರ್ಭದಲ್ಲೇ ನಾವು ವಿರೋಧ ಮಾಡಿದ್ದೆವು. ಕನ್ನಡಿಗರಿಗೆ ಆಗುವಂತಹ ಅನ್ಯಾಯದ ಬಗ್ಗೆ ನಾನು ಮಾತನಾಡಿದ್ದೆ. ಕನ್ನಡಿಗ ವಿದ್ಯಾರ್ಥಿಗಳಿಗೆ ಯಾವ ರೀತಿಯಾಗಿ ಸೀಟ್‍ನಲ್ಲಿ ಸಮಸ್ಯೆಯಾಗುತ್ತದೆಂದು ಹೇಳಿದ್ದೆ. ನೀಟ್ ಒಂದು ದೊಡ್ಡ ಹಗರಣ. ಇಷ್ಟು ವರ್ಷ ನಡೆದ ಪರೀಕ್ಷೆಗಳ ಬಗ್ಗೆಯೂ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.






