ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಇದರಿಂದ ನಷ್ಟವಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲಾ ಸಮಾಜ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ವತಿಯಿಂದ ಒಂದು ತಂಡ ಕಳುಹಿಸಿ ವರದಿ ನೀಡಲು ಹೇಳಿದ್ದೇವೆ. ಅಧಿಕಾರಿಗಳು ನೀಡುವ ವರದಿ ಬೇರೆ, ಸಾರ್ವಜನಿಕರ ಜತೆ ಚರ್ಚೆ ಮಾಡಿ ವರದಿ ನೀಡಲು ನಮ್ಮ ಪಕ್ಷದವರಿಗೆ ತಿಳಿಸಿದ್ದೇನೆ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಬೇಕು. ಇದು ಒಂದು ಸಾವು, ಎರಡು ಸಾವಿನ ವಿಚಾರ ಮಾತ್ರವಲ್ಲ. ಇದು ಇಡೀ ಕರಾವಳಿ ಭಾಗಕ್ಕೆ ಬಿದ್ದಿರುವ ಕೊಡಲಿಪೆಟ್ಟು. ಜನರು ಆಂತಕಕ್ಕೆ ಒಳಗಾಗುವುದು, ಬಂಡವಾಳ ಹೂಡಿಕೆದಾರರು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ಸ್ನೇಹಿತರು ಹಾಗೂ ಬೇರೆ ಬೇರೆ ಸಂಘಟನೆಗಳಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ, “ಅವರ ಪಕ್ಷದವರು ಯಾಕೆ ಗಾಬರಿಯಾಗಬೇಕು? ಅವರು ಒಂದೇ ಪಕ್ಷ ಅಲ್ಲವಲ್ಲ. ಅವರು ಎರಡು ಪಕ್ಷ ಸೇರಿ ಒಟ್ಟಿಗೆ ಇದ್ದಾರಲ್ಲಾ? ಅವರು ಯಾರ ಜತೆ ಬೇಕಾದರೂ ಬೇರೆಯಬಹುದು. ಜನ, ಕಾರ್ಯಕರ್ತರು, ಮುಖಂಡರು ನಮ್ಮ ಜತೆ ಸೇರಲು ಆಸೆ ಪಡುತ್ತಿದ್ದಾರೆ. ಅವರನ್ನು ಬೇಡ ಎನ್ನಲು ಸಾಧ್ಯವೇ?” ಎಂದು ತಿಳಿಸಿದರು.





