ಶಾಲೆಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಡಿ.ಕೆ.ಶಿವಕುಮಾರ್ ಸೂಚನೆ

ಡಿ.ಕೆ.ಶಿವಕುಮಾರ್
ಬೆಂಗಳೂರು : ನಗರದಲ್ಲಿರುವ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆಯೇ ಶಾಲೆ ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯ ಉತ್ತರ ಡಿಡಿಪಿಐಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಕಾನೂನು ಕೈಗೆತ್ತಿಕೊಂಡು ಶಾಲೆಯನ್ನು ಕಬ್ಜ ಮಾಡಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ಮುಖ್ಯ. ಈ ರೀತಿ ಮಾಡುವವರು ಕಾಂಗ್ರೆಸ್ ನಾಯಕರೇ ಆಗಿರಲಿ ಅಥವಾ ಬೇರೆಯವರೇ ಆಗಿರಲಿ ಯಾರನ್ನೂ ಬಿಡಬಾರದು. ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಖಾಸಗಿ ಶಾಲೆಯಾದರೂ ಅದು ಸಾರ್ವಜನಿಕ ಸಂಸ್ಥೆ. ನಾನು ಶಾಲೆಗಳನ್ನು ನಡೆಸುತ್ತಿದ್ದೇನೆ. ನಾನು ಅದರ ವಾರಸುದಾರನಾಗಿರಬಹುದು, ಆದರೆ ಮಾಲಕನಾಗಲು ಆಗುವುದಿಲ್ಲ. ಎಂತಹುದೇ ಪರಿಸ್ಥಿತಿ ಬಂದರೂ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಹಿತ ಕಾಪಾಡುತ್ತೇವೆ. ಪ್ರತಿಯೊಬ್ಬರೂ ಕಾನೂನಿಗೆ ಗೌರವ ನೀಡಬೇಕು. ಇಲ್ಲಿ ಯಾರೂ ಶಾಶ್ವತ ಅಲ್ಲ ಎಂದು ತಿಳಿಸಿದರು.
ಈ ಸಮಸ್ಯೆ ಬಗೆಹರಿಯದಿದ್ದರೆ, ಅಗತ್ಯಬಿದ್ದರೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ನೂರಾರು ಸಂಖ್ಯೆಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಬಂದು ಮನವಿ ಮಾಡಿದಾಗ ಜಿಲ್ಲಾ ಮಂತ್ರಿಯಾಗಿ ನಾನು ಭೇಟಿ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭೇಟಿ ಮಾಡಿ, ಧನಂಜಯ ಎಂಬುವರು ಅಕ್ರಮವಾಗಿ ಶಾಲೆಯನ್ನುಆಕ್ರಮಿಸಿಕೊಂಡು ಗೂಂಡಾಗಳ ನೆರವಿನಿಂದ ಶಾಲೆಯ ಆವರಣದಿಂದ ತಮ್ಮನ್ನು ಹೊರಗೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದರು.







