ಡಿ.ಕೆ.ಶಿವಕುಮಾರ್ ಪಾಕಿಸ್ತಾನದ ಮುಖ್ಯಮಂತ್ರಿಯಲ್ಲ; ನಮ್ಮ ರಾಜ್ಯದ ಮುಖ್ಯಮಂತ್ರಿ : ವಿವಾದಾತ್ಮಕ ಹೇಳಿಕೆ ನೀಡಿದ ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ಪಾಕಿಸ್ತಾನದ ಮುಖ್ಯಮಂತ್ರಿಯಲ್ಲ, ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗಾಗಿ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಬದಲು ಅವರೇ ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡುತ್ತಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರ ಭಾಷಣಕ್ಕೆ ಕತ್ತರಿ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಂದಾಗ ವೇದಿಕೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ ಎಂದು ನಾವೇನೂ ಕಣ್ಣೀರು ಹಾಕಿಲ್ಲ. ಹಿಂದೆ ನನಗೆ ವೇದಿಕೆ ಮೇಲೆ ಹೋಗುವ ಅವಕಾಶ ಸಿಕ್ಕಿತ್ತು. ಈಗ ಸಿಕ್ಕಿಲ್ಲ. ಶಿಷ್ಟಾಚಾರ ಇರುವುದರಿಂದ ನಿಯಮ ಪಾಲಿಸಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸಚಿವ ಕೃಷ್ಣ ಭೈರೇಗೌಡರಿಗಿಂತಲೂ ಚೆನ್ನಾಗಿ ಮಾತಾಡುತ್ತಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯೇ ಹೊರತು ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ. ಅವರು ಮಾತಾಡುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಮುಖ್ಯಮಂತ್ರಿಯೇ ಮಾತಾಡುವುದರಿಂದ ಸಚಿವರಿಗೆ ವಿಶೇಷವಾಗಿ ಮಾತಾಡಲು ಏನೂ ವಿಷಯಗಳಿರುವುದಿಲ್ಲ. ಸಚಿವರಿಗೆ ಏನಾದರೂ ಕೇಳಬೇಕೆಂದರೆ ಹೊಸದಿಲ್ಲಿಗೆ ಹೋಗಿ ಮನವಿ ಮಾಡಲಿ ಎಂದು ಹೇಳಿದರು.
ಮೆಟ್ರೊ ಯೋಜನೆಯಲ್ಲಿ ಶೇ.20 ರಾಜ್ಯ ಸರಕಾರ ಹಾಗೂ ಶೇ.20 ಕೇಂದ್ರ ಸರಕಾರ ಪಾಲು ಹೊಂದಿದೆ. ಉಳಿದಿದ್ದನ್ನು ಬಿಎಂಆರ್ಸಿಎಲ್ ಸಾಲದ ಮೂಲಕ ಹೊಂದಿಕೆ ಮಾಡುತ್ತದೆ. ಶೇ.80ರಷ್ಟು ಪಾಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಬಜೆಟ್ನಲ್ಲಿ ತೋರಿಸಬೇಕಿತ್ತು. ಕಾಂಗ್ರೆಸ್ ನಾಯಕರು ಈ ಬೋಗಸ್ ಲೆಕ್ಕಗಳನ್ನು ನೀಡುವುದನ್ನು ಬಿಟ್ಟು, ಕೇಂದ್ರದ ಜೊತೆ ಉತ್ತಮ ಸಂಬಂಧ ಹೊಂದಿ ಹೆಚ್ಚು ಅನುದಾನ ತರುವುದಕ್ಕೆ ಗಮನಹರಿಸಲಿ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಟೆಲಿಪ್ರಾಂಪ್ಟರ್ ಬಳಸುವುದಾದರೆ ಸಚಿವ ಪ್ರಿಯಾಂಕ್ ಖರ್ಗೆ ಯಾವುದನ್ನು ಬಳಸುತ್ತಾರೆ? ತಂದೆ ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕ ಆಗಿರುವುದರಿಂದಲೇ ಇವರಿಗೆ ಸೂಕ್ತ ಸ್ಥಾನಮಾನ, ಬೆಲೆ ಸಿಕ್ಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಂದೆಯಿಂದ ಈ ಸ್ಥಾನ ದೊರೆತಿದೆ. ಆದ್ದರಿಂದ ಹೀಗೆ ಮಾತಾಡುವಾಗ ತಮ್ಮ ಬೆಲೆ ಏನು ಎಂದು ತಿಳಿದು ಮಾತಾಡಲಿ ಎಂದು ಅಶೋಕ್ ಹೇಳಿದರು.






