3 ವರ್ಷಗಳಿಂದ ಮೈಸೂರು-ಚಾಮರಾಜನಗರ ವ್ಯಾಪ್ತಿಯ 228 ಕೆರೆಗಳಿಗೆ ನೀರು : ಡಾ.ಅಜಯ್ ಧರ್ಮಸಿಂಗ್

ಬೆಂಗಳೂರು : ಮೂರು ವರ್ಷಗಳಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 228 ಕೆರೆಗಳಿಗೆ 21 ಏತ ನೀರಾವರಿ ಯೋಜನೆಗಳ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.
ಶುಕ್ರವಾರ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಡಿ.ತಿಮ್ಮಯ್ಯ ಪರವಾಗಿ ಎಂ. ನಾಗರಾಜು ಯಾದವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 228 ಕೆರೆಗಳ ಪೈಕಿ 4 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಮತ್ತು 224 ಕೆರೆಗಳು ಇತರೆ ಇಲಾಖೆಗಳ ವ್ಯಾಪ್ತಿಗೆ ಸೇರಿದ ಕೆರೆಗಳಾಗಿವೆ ಎಂದರು.
ಇದಲ್ಲದೆ ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವತಿಯಿಂದ ನಿರ್ಮಿಸಲಾಗಿರುವ ಏತ ನೀರಾವರಿ ಯೋಜನೆಗಳ ಮೂಲಕ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ 3 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಮೈಸೂರು ಜಿಲ್ಲೆಯಲ್ಲಿ 50 ಕೆರೆಗಳು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 64 ಕೆರೆಗಳು ಅಸ್ತಿತ್ವದಲ್ಲಿದೆ. ಈ ಕೆರೆಗಳು ಬಹುತೇಕ ಹಳೆಯ ಕೆರೆಗಳಾಗಿದ್ದು, ಪ್ರಾಕೃತಿಕ ವಿದ್ಯಮಾನಗಳಿಂದಾಗಿ ಸದರಿ ಕೆರೆಗಳಲ್ಲಿ ಹೂಳು ತುಂಬುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಕೆರೆಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸಿ, ಸುಸ್ಥಿತಿಯಲ್ಲಿರಿಸಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.






