ಪಶುಪಾಲಕ ಸಮುದಾಯಗಳ ಆರ್ಥಿಕ ಪ್ರೋತ್ಸಾಹಕ್ಕೆ ಕ್ರಿಯಾ ಯೋಜನೆ ಅಗತ್ಯ : ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು : ಪಶುಪಾಲಕ ಸಮುದಾಯಗಳಿಗೆ ಆರ್ಥಿಕ ಚಟುವಟಿಕೆಗಳಿಗೆ ಸರಕಾರದ ಪ್ರೋತ್ಸಾಹ ಏನು ಎಂಬುದಕ್ಕೆ ಕ್ರಿಯಾ ಯೋಜನೆ ಅಗತ್ಯವಿದೆ ಎಂದು ಸಂಸ್ಕೃತ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ಶನಿವಾರ ನಗರದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಸೆಂಟರ್ ಫಾರ್ ಪ್ರಾಸ್ಟೋರಲಿಸಮ್ ಸಹಜೀವನ್ ವತಿಯಿಂದ ಆಯೋಜಸಿದ್ದ ಪಶುಪಾಲಕ ಕರ್ನಾಟಕ, ಕಥನಗಳು ಮತ್ತು ಮುಂದಿನ ನಡೆಗಳ ಕುರಿತ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಪಶುಪಾಲನೆ ಸಮುದಾಯಗಳ ಜೀವನ ಶೈಲಿ ಮತ್ತು ಸಾಂಸ್ಕೃತಿಕತೆಗೆ ಮಹತ್ವ ಕಲ್ಪಿಸಲು ಏನು ಕಾರ್ಯಕ್ರಮ ರೂಪಿಸಬಹುದು ಎಂಬುದನ್ನು ಸರಕಾರ ಚಿಂತನೆ ನಡೆಸಬೇಕು.
ಅರಣ್ಯದಲ್ಲಿ ಕುರಿ, ಮೇಕೆ, ದನ ಮೇಯಿಸಲು ಕೆಲವು ನಿಯಮಗಳಿವೆ. ಮೇಕೆಗಳು ಮಾತ್ರ ಸಸಿಗಳು ಹುಟ್ಟುವ ಸಮಯದಲ್ಲಿ ಅವುಗಳನ್ನು ರಕ್ಷಿತಾರಣ್ಯಗಳಿಗೆ ಬಿಡಬಾರದು ಎಂಬುದು ಒಂದು ನಿಯಮ. ಇದು ಕುರಿ ಮತ್ತು ದನಗಳಿಗೆ ಸಂಬಂಧಿಸಿದ್ದು ಅಲ್ಲ ಎಂದು ತಿಳಿಸಿದರು.
ಕುರಿ, ದನಗಳು ಅರಣ್ಯಗಳ ಬೆಳವಣಿಗೆಗೆ ಪೂರಕವಾಗಿರುತ್ತವೆಯೋ, ವಿರೋಧವಾಗಿರುತ್ತವೆಯೋ ಎಂಬುದು ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ ಎನಿಸುತ್ತದೆ. ದನ, ಕುರಿಗಳನ್ನು ಅರಣ್ಯದಲ್ಲಿ ಮೇಯಿಸಲು ಅವಕಾಶ ನೀಡಬೇಕು. ಜಾಗಗಳನ್ನಾದರೂ ಗುರುತಿಸಬೇಕು. ಸಾಧ್ಯವಾದರೆ ಮೇಯಿಸಬಹುದಾದ ಜಾಗಗಳಿಗೆ ಬೇಲಿ ಹಾಕಬೇಕು ಎಂದು ಒತ್ತಾಯಿಸಿದರು.
ಕೆರೆ ಬಯಲುಗಳನ್ನು ಹಂಚಬಾರದು, ಗೋಮಾಳಗಳನ್ನು ದರ್ಖಾಸ್ಥುಗೊಳಿಸಬಾರದು. ಹಂದಿಯೂ ಸೇರಿದಂತೆ ಸಾಕಾಣಿಗೆ ಒಳಪಡುವ ಎಲ್ಲ ಪ್ರಾಣಿಗಳಿಗೆ ವಿಮೆ ಮಾಡಬೇಕು. ಅವು ಸತ್ತರೆ ನಷ್ಟವಾಗಿರುವವರಿಗೆ ಹಣಕಾಸಿನ ನೆರವು ನೀಡಬೇಕು ಎನ್ನುವ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ವೃತ್ತಿಯಿಂದಾಗಿ ಪಶುಪಾಲಕರಾಗಿರುವವರಿಗೆ ವಿಶೇಷ ಯೋಜನೆಯನ್ನು ರೂಪಿಸಬೇಕು. ಅಲೆಮಾರಿ ಕುರಿಗಾಹಿಗಳಿಗೆ ಸಂಚಾರ ಹೊರಟಾಗ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಸಿಡಿಲಿನಿಂದ ರಕ್ಷಿಸುವ ಟೆಂಟ್‍ಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಡಾ.ನೆಲ್ಲುಕುಂಟೆ ವೆಂಕಟೇಶ್ ಮಾತನಾಡಿ, ಪಶುಪಾಲಕ ಸಮುದಾಯಗಳು ಒಂದು ವರ್ಗವಾಗಿ ಯೋಚನೆ ಮಾಡುವ ಅನಿವಾರ್ಯತೆ ಇದೆ. ಭಾರತದಲ್ಲಿ ಶೇ.20ರಿಂದ 25ರಷ್ಟು ಪಶುಪಾಲಕ ಸಮುದಾಯಗಳಿವೆ. ಈಗಾಗಲೇ ಅಲೆಮಾರಿ ಕುರಿಗಾರರ ರಕ್ಷಣೆಗಾಗಿ ಒಂದು ಕಾಯ್ದೆ ಸಿದ್ಧವಾಗುತ್ತಿದೆ. ಕಾಯ್ದೆಯಲ್ಲಿ ಬಂದೂಕು ಪರವಾನಿಗೆ, ಟೆಂಟ್ ನೀಡುವುದು ಸೇರಿದಂತೆ ಅನೇಕ ವಿಷಯಗಳಿವೆ ಎಂದರು.
ಆಕಸ್ಮಿಕವಾಗಿ ಮರಣಹೊಂದಿದ ಕುರಿ, ಹಸು ಇತ್ಯಾದಿ ಪ್ರಾಣಿಗಳ ಮಾಲಕರಿಗೆ ನೀಡುತ್ತಿದ್ದ 5ಸಾವಿರ ರೂ. ಪರಿಹಾರವನ್ನು ಹೆಚ್ಚು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಂಬರಲಿರುವ ಬಜೆಟ್‍ನಲ್ಲೆ ಘೋಷಣೆ ಮಾಡಲಿದ್ದಾರೆ. ಪಶುಪಾಲಕರನ್ನು ಡಿಸಿಸಿ ಬ್ಯಾಂಕ್‍ನ ಸದಸ್ಯರಾಗಲು, ಔಷಧಿ ನೀಡುವುದು, ಲಸಿಕೆ ಇತ್ಯಾದಿಗಳ ಬಗ್ಗೆ ಚಿಂತನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ದುಂಡುಮೇಜಿನ ಸಭೆಯಲ್ಲಿ ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ, ಡಾ.ರಹಮತ್ ತರಿಕೆರೆ, ಪ್ರೊ. ರಾಜಪ್ಪ ದಳವಾಯಿ, ಡಾ.ವಡ್ಡಗೆರೆ ನಾಗರಾಜಯ್ಯ, ಡಾ.ಮುತ್ತಯ್ಯ, ಡಾ.ಲಕ್ಷ್ಮೀಪತಿ ಸಿ.ಜಿ., ರವಿಕುಮಾರ್ ಬಾಗಿ, ಡಾ.ಪ್ರೇಮಾ ಜಿ.ಕೆ, ಹರ್ಷಕುಮಾರ್ ಕುಗ್ವೆ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ನಿರ್ಣಯಗಳು: ಪಶುಪಾಲಕ ಮಾರ್ಗಗಳ ರಕ್ಷಣೆ, ಕುರಿಗಾರರ ಮಕ್ಕಳಿಗೆ ಟೆಂಟ್ ಶಾಲೆ ನಿರ್ಮಾಣ, ಭೂ ಮಾಲಕರಿಂದ ಕುರಿಗಾರರಿಗೆ ಆಗುವ ಕಿರುಕುಳ ತಡೆಯಲು ಕಾನೂನು ರೂಪಿಸಬೇಕು. ಗೋಮಾಳ, ಕೆರೆಗಳ ಒತ್ತುವರಿ ತೆರವುಗೊಳಸಿ ಕುರಿ-ಆಡು ಮೇಯಿಸಲು ಅವಕಾಶ ಕಲ್ಪಿಸಬೇಕು. ಕುರಿ ಮತ್ತು ಉಣ್ಣೆ ಉತ್ಪಾದನಾ ಸಹಕಾರ ಸಂಘಗಳ ಸಬಲೀಕರಣ, ಎಪಿಎಂಸಿ ವ್ಯಾಪ್ತಿಯಲ್ಲಿ ಕುರಿ ಸಂತೆ ನಡೆಸಲು ಮೂಲಸೌಕರ್ಯ, ಆಧುನಿಕ ತೂಕದ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ 200 ಮೀಟ್ ಪಾರ್ಲರ್ ತೆರೆಯಬೇಕು. ಮಾಂಸ, ಚರ್ಮ, ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತಾದ ಡಿಪ್ಲೊಮಾ ಕೋರ್ಸ್ ತೆರೆಯಬೇಕು ಎಂಬುದು ಸೇರಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.







