ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ | ಅ.15ರೊಳಗಾಗಿ ಅರ್ಜಿ ಸಲ್ಲಿಸಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಡಾ.ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2026-27ನೆ ಸಾಲಿಗೆ ಎಲ್ಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅ.15ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆರ್ಯ ವೈಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 4 ಯೋಜನೆಗಳಿಗೆ 2026-27ನೇ ಸಾಲಿಗೆ ಅರ್ಜಿ ಆಹ್ವಾನಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಆರ್ಯ ವೈಶ್ಯ ಸಮುದಾಯದವರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಕೃಷಿಗೆ ಮತ್ತು ಆಹಾರ ತಯಾರಿಕೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಿ, ಆರ್ಯ ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ’ವನ್ನು ಸ್ಥಾಪನೆ ಮಾಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಕಳೆದ 7 ವರ್ಷಗಳಿಂದ ನಿಗಮಕ್ಕೆ ಬಿಡುಗಡೆಯಾದ ಅನುದಾನ ಹಾಗೂ ಮರುಪಾವತಿ ಮೊತ್ತ ಸೇರಿಸಿ ಒಟ್ಟು 85 ಕೋಟಿ ರೂ.ಗಳಲ್ಲಿ 16,785 ಫಲಾನುಭವಿಗಳಿಗೆ ಸಾಲ-ಸಬ್ಸಿಡಿ ಮತ್ತು ಶುಲ್ಕ ಮರುಪಾವತಿ ನೀಡಿ ಶೇ.96ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂದುವರೆದು, 11 ಕೋಟಿ ರೂ. ಸಾಲ ಮರುಪಾವತಿಯನ್ನು ಪಡೆಯುವಲ್ಲಿ ನಿಗಮವು ಯಶಸ್ವಿಯಾಗಿದೆ ಹಾಗೂ 740 ಫಲಾನುಭವಿಗಳು ಪೂರ್ಣಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿರುವುದು ಈ ನಿಗಮದ ವಿಶಿಷ್ಟ ಸಾಧನೆಯಾಗಿದೆ ಎಂದು ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷ ಕೆ.ವಿ.ರಾಮ್ ಪ್ರಸಾದ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಾಶ್ರೀ ಕೆ. ಉಪಸ್ಥಿತರಿದ್ದರು.






