ಯುಪಿಐ ಮೇಲಿನ ಶುಲ್ಕ ನಿರ್ಧಾರ; ಡಿಜಿಟಲ್ ಪಾವತಿ ಪ್ರಗತಿಯ ಹಿಮ್ಮುಖ ಚಲನೆ: ಡಾ.ಜಿ.ಪರಮೇಶ್ವರ್

ಬೆಂಗಳೂರು : ಯುಪಿಐ ಯಶಸ್ವಿಗೆ ಪ್ರಮುಖ ಕಾರಣವೆಂದರೆ ಅದರ ಬಳಕೆಯಲ್ಲಿನ ಸರಳ ವಿಧಾನ ಮತ್ತು ಉಚಿತ ಲಭ್ಯತೆ. ಸಾಮಾನ್ಯರಿಂದ ಹಿಡಿದು ಸಣ್ಣ ವ್ಯಾಪಾರಿಗಳ ವರೆಗೆ ಎಲ್ಲರನ್ನೂ ಡಿಜಿಟಲ್ ಆರ್ಥಿಕತೆಯತ್ತ ಕರೆದೊಯ್ಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ಇದೀಗ 2ಸಾವಿರ ರೂ. ಗಳಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇ.0.4ರ ವ್ಯಾಪಾರ ರಿಯಾಯಿತಿ ದರ(ಎಂಡಿಆರ್) ವಿಧಿಸುವ ಈಗಿನ ನಿರ್ಧಾರವು ಈ ಮೂಲಭೂತ ವ್ಯವಸ್ಥೆಯನ್ನು ದುರ್ಬಲಗೊಳಿಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ಗುರುವಾರ ಪ್ರಕಟಣೆ ನೀಡಿರುವ ಅವರು, ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ಪಾವತಿ ಸ್ವೀಕರಿಸುವುದಕ್ಕಾಗಿ ವ್ಯಾಪಾರಿಗೆ ಹೆಚ್ಚುವರಿ ವೆಚ್ಚವನ್ನು ವಿಧಿಸಿದಾಗ, ಅಂತಿಮವಾಗಿ ಆ ವೆಚ್ಚವನ್ನು ಯಾರು ಭರಿಸುತ್ತಾರೆಂಬುದೇ ಪ್ರಶ್ನೆ. ಈ ಹೆಚ್ಚುವರಿ ವೆಚ್ಚವು ವಸ್ತುಗಳ ಬೆಲೆ ಅಥವಾ ಇತರ ಶುಲ್ಕಗಳ ರೂಪದಲ್ಲಿ ಗ್ರಾಹಕರ ಮೇಲೆಯೇ ಬೀಳುವ ಸಾಧ್ಯತೆಯ ಬಗ್ಗೆ ಸಹಜವಾಗಿಯೇ ಆತಂಕವಿದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವಂತೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೊಮ್ಮೆ ಅಮೆರಿಕದ ಒತ್ತಡಕ್ಕೆ ಮಣಿದು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಮೆರಿಕದ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಮುಕ್ತಗೊಳಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. 2ಸಾವಿರ ರೂ.ಗಳಿಗಿಂತ ಹೆಚ್ಚಿನ ವಹಿವಾಟುಗಳು ಒಟ್ಟು ಯುಪಿಐ ವಹಿವಾಟುಗಳ ಸಂಖ್ಯೆಯಲ್ಲಿ ತುಲನಾತ್ಮಕವಾಗಿ ಸಣ್ಣ ಪಾಲು ಹೊಂದಿದ್ದರೂ, ಒಟ್ಟು ವಹಿವಾಟಿನ ಮೌಲ್ಯದಲ್ಲಿ ಅವು ಸುಮಾರು ಶೇ.65ರಷ್ಟು ಪಾಲು ಹೊಂದಿವೆ ಎಂದು ಅವರು ಹೇಳಿದ್ದಾರೆ.
ಭಾರತದ ಡಿಜಿಟಲ್ ಪಾವತಿ ಆರ್ಥಿಕತೆಯ ಇಷ್ಟು ದೊಡ್ಡ ಭಾಗದ ಮೇಲೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೆ ಬರುತ್ತಿದ್ದರೆ, ಹೀಗೆ ನೀತಿಯಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು? ಮತ್ತು ಅಂತಿಮವಾಗಿ ಯಾರ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ? ಎಂಬುದಕ್ಕೆ ಕೇಂದ್ರ ಸರಕಾರ ಉತ್ತರಿಸಲೇಬೇಕು ಎಂದು ಪರಮೇಶ್ವರ್ ಆಗ್ರಹಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ಲಾಭ ಪಡೆಯುವವರ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಯಬೇಕಿದೆ. ಎಂಡಿಆರ್ ಅನ್ನು ವ್ಯಾಪಾರಿ ಪಾವತಿಸುತ್ತಾನೆ. ಆದರೆ ಬ್ಯಾಂಕ್‍ಗಳು, ಪಾವತಿ ಕಂಪೆನಿಗಳು ಮತ್ತು ಇತರ ಮಧ್ಯವರ್ತಿಗಳಿಗೆ ಹೊಸ ಆದಾಯದ ಮೂಲವೊಂದು ಸೃಷ್ಟಿಯಾಗುತ್ತದೆ. ಇದೇ ವೇಳೆ, ಗೂಗಲ್ ಪೇ ಮತ್ತು ವಾಲ್‍ಮಾರ್ಟ್ ಬೆಂಬಲಿತ ಫೋನ್‍ಪೇಗಳು ಭಾರತದ ಯುಪಿಐ ವ್ಯವಸ್ಥೆಯ ಬಹುಪಾಲು ವಹಿವಾಟುಗಳನ್ನು ನಿಯಂತ್ರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಯುಪಿಐ ಇನ್ನೂ ‘ಉಚಿತ’ವಾಗಿಯೇ ಉಳಿದಿದೆ ಎಂಬ ಸರಕಾರದ ಹೇಳಿಕೆಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ವಹಿವಾಟು ಹಂತದಲ್ಲಿ ವಿಧಿಸುವ ಶುಲ್ಕವು ಎಲ್ಲಿಯೂ ಮಾಯವಾಗುವುದಿಲ್ಲ. ಅದು ವ್ಯಾಪಾರ ನಡೆಸುವ ವೆಚ್ಚದ ಒಂದು ಭಾಗವಾಗುತ್ತದೆ. ಅಂತಿಮವಾಗಿ ಆ ವೆಚ್ಚವು ಸಾಮಾನ್ಯ ಜನರು ಪಾವತಿಸುವ ವಸ್ತುಗಳ ಬೆಲೆಯಲ್ಲಿಯೂ ಪ್ರತಿಫಲಿಸಬಹುದು. ವಹಿವಾಟಿನ ಸರಪಳಿಯ ಒಂದು ಹಂತದಲ್ಲಿ ಹೊಸ ಶುಲ್ಕವನ್ನು ವಿಧಿಸಿ, ಗ್ರಾಹಕರಿಗೆ ಮಾತ್ರ ಉಚಿತ ಎಂದು ಹೇಳುವುದರಿಂದ ಈ ಮೂಲಭೂತ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರತವು ವಿಶ್ವದಲ್ಲೇ ಅತ್ಯಂತ ಸಮಗ್ರ ಮತ್ತು ಸರ್ವರನ್ನೂ ಒಳಗೊಂಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ಗುರಿ ಹೊಂದಬೇಕು. ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ, ಸುಲಭವಾಗಿ ಲಭ್ಯವಾಗುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪರಮೇಶ್ವರ್ ಒತ್ತಾಯಿಸಿದ್ದಾರೆ.






