ರಾಹುಲ್ ಗಾಂಧಿ ಹೇಳಿಕೆಯನ್ನು ತಿರುಚುತ್ತಿರುವ ಬಿಜೆಪಿ : ಡಾ.ಎಲ್.ಹನುಮಂತಯ್ಯ
ಬೆಂಗಳೂರು : ದೇಶದಲ್ಲಿ ಆರ್ಥಿಕ-ಸಾಮಾಜಿಕ ಸಮಾನತೆ ದೊರೆಯುವ ವರೆಗೆ ಮೀಸಲಾತಿ ಇರಬೇಕು. ಸಮಾನತೆ ದೊರಕಿದೆ ಎಂಬುದು ಖಾತ್ರಿ ಆದಾಗ ಮೀಸಲಾತಿಯನ್ನು ತೆಗೆದು ಹಾಕುವ ಬಗ್ಗೆ ಚಿಂತನೆ ಮಾಡಬಹುದೆಂದು ಅಮೆರಿಕದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಮಾತನ್ನು ಬಿಜೆಪಿಯವರು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಕಿಡಿಗಾರಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮಾತ್ರ ಮೀಸಲಾತಿ ಇಲ್ಲ. ಈ ದೇಶದ ಎಲ್ಲ ಜಾತಿಯವರಿಗೂ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಜನರ ದಾರಿ ತಪ್ಪಿಸಲು ಬಿಜೆಪಿಯವರು ಈ ರೀತಿಯ ತಿರುಚಿದ ಹೇಳಿಕೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚೀನಾ ಭಾರತದ ನೆಲವನ್ನು ಆಕ್ರಮಿಸಿಕೊಂಡಿದೆ. ಸುಮಾರು 4 ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ಚೀನಾದ ಸೈನಿಕರು ಇದ್ದಾರೆ. ಇದರ ಬಗ್ಗೆ ಭಾರತದ ಮಾಧ್ಯಮಗಳು ಮಾತನಾಡುತ್ತಿಲ್ಲ. ಬಿಜೆಪಿ ಇಂತಹ ವಿಷಯಗಳನ್ನು ಮರೆಮಾಚಲು ಬೇರೆ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಹನುಮಂತಯ್ಯ ದೂರಿದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‍ಸಿಪಿ ಮತ್ತು ಶಿವಸೇನೆ ಶಾಸಕರನ್ನು ಬಿಜೆಪಿ ಅಕ್ರಮವಾಗಿ ಪಕ್ಷಕ್ಕೆ ಸೇರಿಸಿಕೊಂಡು ಸರಕಾರ ಬೀಳಿಸಿದ್ದನ್ನು ಕಣ್ಣಾರೆ ನೋಡಿದ್ದೇವೆ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರ ನೀಡುತ್ತಿಲ್ಲ. ಏಕೆಂದರೆ ಬಿಜೆಪಿ ಅವರು ಮಾಡಿರುವುದು ಪ್ರಜಾತಾಂತ್ರಿಕ ದ್ರೋಹ ಎಂಬುದು ಅವರಿಗೆ ತಿಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿರುವುದು ಅಕ್ಷರಶಃ ಸತ್ಯ ಎಂದು ಅವರು ಹೇಳಿದರು.
ಮಣಿಪುರದಲ್ಲಿ ಅನೇಕ ದಿನಗಳಿಂದ ಗಲಭೆ ನಡೆಯುತ್ತಿದೆ. ಪ್ರಧಾನಿ ಮೌನ ವಹಿಸಿದ್ದಾರೆ. ಗಲಭೆ ನಿಯಂತ್ರಣಕ್ಕೆ ಬಿಜೆಪಿ ಸರಕಾರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರೆ ಬಿಜೆಪಿಯ ಯಾರೊಬ್ಬರೂ ಉತ್ತರ ನೀಡುತ್ತಿಲ್ಲ. ಬದಲಾಗಿ ಮೌನವಾಗಿದ್ದಾರೆ ಎಂದು ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಂತ ಹೆಚ್ಚು ರಾಜಕೀಯ ಪ್ರೇರಿತ ಪ್ರಕರಣವನ್ನು ಎದುರಿಸುತ್ತಿರುವ ನಾಯಕ ನಾನು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಕಂಡರೆ ಬಿಜೆಪಿಗೆ ಭಯ. ಆದುದರಿಂದಲೆ, ಅವರ ವಿರುದ್ಧ ಇಷ್ಟೊಂದು ಪಿತೂರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮನೆಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪ್ರಧಾನಿ ಪೂಜೆ ಮಾಡಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಅಲ್ಲದೇ ಜೊತೆಯಲ್ಲಿ ಫೊಟೋಗ್ರಾಫರ್ ಅವರನ್ನು ಕರೆದುಕೊಂಡು ಹೋಗಿ ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಇವರಿಬ್ಬರೂ ಕೆಟ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಇವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎನ್.ಚಂದ್ರಪ್ಪ, ಪಿ.ಆರ್.ರಮೇಶ್, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮಯ್ಯ, ಕಾನೂನು ಘಟಕದ ಅಧ್ಯಕ್ಷ ಅಮರನಾಥ್, ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.