ಡಾ.ಮಹದೇವಪ್ಪರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ದಸಂಸ ಒಕ್ಕೂಟ ಅಸಮಾಧಾನ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಹಿರಿಯ, ಅನುಭವಿ ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪರನ್ನು ಕೈಬಿಟ್ಟಿರುವುದಕ್ಕೆ ದಲಿತ ಸಂಘರ್ಷ ಸಮಿತಿ ಒಕ್ಕೂಟವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸೋಮವಾರ ಒಕ್ಕೂಟದ ಪದಾಧಿಕಾರಿಗಳಾದ ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ, ವಿ. ನಾಗರಾಜ್, ಮಾವಳ್ಳಿ ಶಂಕರ್, ಎನ್.ಮುನಿಸ್ವಾಮಿ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕ ಪ್ರಜ್ಞೆಯ ಸೈದ್ಧಾಂತಿಕ ‘ದಲಿತ ರಾಜಕೀಯ ನಾಯಕತ್ವ’ವನ್ನೇ ಹೊಸಗಿ ಹಾಕುವ ‘ಚಾಳಿ’ಯನ್ನು ಕಾಂಗ್ರೆಸ್ ಅಭ್ಯಾಸ ಮಾಡಿಕೊಂಡಂತಿದೆ ಎಂದಿದ್ದಾರೆ.
ಈ ಹಿಂದೆ ‘ದಲಿತ ಸಾಂಸ್ಕೃತಿಕ ಹಾಗೂ ಸ್ವಾಭಿಮಾನಿ ನಾಯಕರಾಗಿದ್ದ ಬಿ.ಬಸವಲಿಂಗಪ್ಪರವರನ್ನೂ’ ಹೀಗೇ ಕಡೆಗಣಿಸುವ ಮೂಲಕ ಕಾಂಗ್ರೆಸ್ ಅಪಮಾನ ಮಾಡಿತ್ತು. ಕಾಂಗ್ರೆಸ್ ನಿಂದ ಹೀಗೆ ಕಡೆಗಣಿಸಲ್ಪಟ್ಟ ದಲಿತ ರಾಜಕಾರಣಿಗಳ ಪಟ್ಟಿ ಬಹಳ ದೊಡ್ಡದೇ ಇದೆ. ಎನ್.ರಾಚಯ್ಯ, ಕೆ.ಎಚ್.ರಂಗನಾಥ್, ವಿ.ಶ್ರೀನಿವಾಸ್ ಪ್ರಸಾದ್....ಅಷ್ಟೇ ಏಕೆ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಮುಖ್ಯಮಂತ್ರಿ ಮಾಡಬಹುದಾಗಿದ್ದ ಅವಕಾಶವನ್ನು ಕಾಂಗ್ರೆಸ್ ಹೀಗೇ ಹಾಳು ಮಾಡಿತ್ತು. ಹಾಗಾಗಿ ಈವರೆಗೂ ದಲಿತ ಸಮುದಾಯದ ಮುಖ್ಯಮಂತ್ರಿಯ ಕನಸು ಕನಸಾಗಿಯೇ ಉಳಿದಿದೆ ಎಂದು ಹೋರಾಟಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‍ನ ಈ ದಲಿತ ವಿರೋಧಿ ಧೋರಣೆ ಹೀಗೇ ಮುಂದುವರಿದರೆ, ನಾಳೆ ಈಗ ಹಾಲಿ ಸಚಿವರಾಗಿರುವ ಎಲ್ಲ ದಲಿತ ಮಂತ್ರಿಗಳು ಒಂದು ಹಂತದವರೆಗೆ ಬಂದ ಮೇಲೆ ಮುಂದೆ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆಂದೆನಿಸಿದ ಕೂಡಲೇ ಈಗ ಮಹದೇವಪ್ಪನವರಿಗಾಗಿರುವ ಸ್ಥಿತಿ ಇವರ್ಯಾರಿಗೂ ಆಗುವುದಿಲ್ಲ ಎಂಬುದನ್ನು ಹೇಳಲಾಗದು. 2023ರ ವಿಧಾನಸಭಾ ಚುನಾವಣೆಯಲ್ಲಿ 136 ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗಲು ಡಾ.ಎಚ್.ಸಿ.ಮಹದೇವಪ್ಪ ಒಬ್ಬರು ಪ್ರಮುಖ ಕಾರಣ ಎಂಬುದನ್ನು ಕಾಂಗ್ರೆಸ್ ಹೈ ಕಮಾಂಡ್ ಮರೆತಂತಿದೆ ಎಂದು ಅವರು ಹೇಳಿದ್ದಾರೆ.
ಹೈಕಮಾಂಡ್ ನಿಂದ ಎರಡನೇ ಕಂತಿನ ಸಚಿವರ ಪಟ್ಟಿ ಅನುಮೋದನೆಗೊಂಡು ಬಂದ ಮೇಲೂ ಪದೇಪದೇ ಹೆಸರುಗಳ ಬದಲಾವಣೆ ಮಾಡಿದ್ದು, ಪ್ರಮಾಣ ವಚನದ ಸಮಯವನ್ನು ಮುಂದೂಡಿದ್ದು, ಒಬ್ಬರು ಮಹಿಳಾ ಹೆಸರನ್ನು ತಡೆಹಿಡಿದಿದ್ದು ಮತ್ತೆ, ಈಗಲೂ ಪ್ರಮಾಣ ವಚನ ಸ್ವೀಕರಿಸಿದವರಿಂದ ರಾಜೀನಾಮೆ ಕೊಡಿಸಿ ಮತ್ತೊಬ್ಬರಿಗೆ ಮಂತ್ರಿ ಮಾಡಲೊರಟಿರುವುದು, ಇಷ್ಟೆ ಲ್ಲಾ ಪ್ರಹಸನ ಸಾಧ್ಯವಾಗುವುದಾದರೆ ಇದೇ ಮಾನದಂಡವನ್ನು ಮಹದೇವಪ್ಪ ನವರಿಗೆ ಏಕೆ ಅಳವಡಿಸಬಾರದು? ದಲಿತರಿಗೊಂದು ನ್ಯಾಯ, ಇತರ ಪ್ರಬಲ ಜಾತಿಗಳಿಗೊಂದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದೆನಾ ಕಾಂಗ್ರೆಸ್‍ನ ಮನಸ್ಥಿತಿ? ಪ್ರಜ್ಞಾವಂತ ದಲಿತ ಸಮುದಾಯ ಈ ವಿದ್ಯಮಾನವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಇದರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಸಿದೆ.






