ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ | ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಲು ಡಿಸಿಎಂ ಡಾ.ಪರಮೇಶ್ವರ್ ಸೂಚನೆ

ಬೆಂಗಳೂರು : ರಾಜ್ಯದಲ್ಲಿನ ‘ಎ' ವರ್ಗ ಮತ್ತು ‘ಬಿ' ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದರು.
ಶನಿವಾರ ವಿಧಾನಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಬಳಿಕ ಅವರು ಅಗತ್ಯ ನಿರ್ದೇಶನಗಳನ್ನು ನೀಡಿದರು.
ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ದೇವಸ್ಥಾನದ ಹೆಸರಿಗೆ ಭೂಮಿ ಖರೀದಿಸಬೇಕು. ಈ ಆಸ್ತಿ ಶಾಶ್ವತವಾಗಿ ದೇವಸ್ಥಾನಕ್ಕೆ ಉಳಿಯುತ್ತದೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ದೇವಸ್ಥಾನದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.
ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇದನ್ನು ಆಗಸ್ಟ್ ಕೊನೆಯ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಹಗುರವಾಗಿ ಪರಿಗಣಿಸುವುದು ಬೇಡ ಎಂದು ಅವರು ಹೇಳಿದರು.
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ನಾನು ಭೇಟಿ ನೀಡಿ ಪರಿಶೀಲಿಸಿದ ದೇವಸ್ಥಾನಗಳಲ್ಲಿ ‘ನಾವು ಯಾವ ಯುಗದಲ್ಲಿದ್ದೇವೆ' ಎಂಬ ಪ್ರಶ್ನೆ ಮೂಡುತ್ತದೆ. ಯಾರೊಬ್ಬರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಕಾಪಾಡದೆ ಹೋದರೆ ಹೇಗೆ ಎಂದು ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ ಎಂದು ಅವರು ಎಚ್ಚರಿಸಿದರು.
‘ಸಿ’ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ. ‘ಎ' ವರ್ಗದ ದೇವಸ್ಥಾನಗಳ ಅನುದಾನದಲ್ಲಿ ಶೇ. 10ರಷ್ಟನ್ನು ‘ಸಿ' ವರ್ಗದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು ಎಂದು ಪರಮೇಶ್ವರ್ ತಿಳಿಸಿದರು.
ದೇವಸ್ಥಾನಗಳ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಉಪ ಮುಖ್ಯಮಂತ್ರಿ ಸ್ಪಷ್ಟ ನಿರ್ದೇಶನ ನೀಡಿದರು.
ಈ ವೇಳೆ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಮುಜರಾಯಿ ಆಯುಕ್ತ ಶರತ್ ಹಾಗೂ ಧಾರ್ಮಿಕ ಪರಿಷತ್‍ನ ಸದಸ್ಯರಾದ ಕೆ.ಎಂ.ನಾಗರಾಜು, ಡಾ.ಎ. ರಾಧಾಕೃಷ್ಣ ರಾಜು, ದ್ವಾರಕನಾಥ್, ಮಲ್ಲಿಕಾ ಪ್ರಶಾಂತ್ ಪಕ್ಕಳ, ರವಿಶಂಕರ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






