‘ಮೈಸೂರು ದಸರಾ’ ಹೊಸ ಬದಲಾವಣೆ ಮಾಡಿಲ್ಲ : ಡಾ.ಪರಮೇಶ್ವರ್

ಬೆಂಗಳೂರು : ಮೈಸೂರು ದಸರಾ ಉತ್ಸವದಲ್ಲಿ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯವನ್ನೇ ಈ ಬಾರಿಯೂ ಮುಂದುವರಿಸಲಾಗಿದೆ. ಹೊಸದಾಗಿ ಯಾವುದೇ ಬದಲಾವಣೆ ಮಾಡಿಲ್ಲ. ರಾಜಮನೆತನದವರಿಗೆ ಯಾವುದೇ ರೀತಿಯ ಬೇಸರವಾಗಿದ್ದರೆ ಅವರನ್ನು ಭೇಟಿ ಮಾಡಿ ಮಾತನಾಡಿ ಸರಿಪಡಿಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಶಾಸಕರ ಭವನದ ಮುಂಭಾಗದಲ್ಲಿರುವ ವಾಲ್ಮೀಕಿ ತಪೋವನದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಮನೆತನದ ಆಡಳಿತದ ನಂತರವೂ ದಸರಾ ಸಂಪ್ರದಾಯವನ್ನು ಯಾವ ರೀತಿಯಲ್ಲಿ ಮುಂದುವರಿಸಿಕೊಂಡು ಬರಲಾಗಿದೆಯೋ, ಅದೇ ಸಂಪ್ರದಾಯವನ್ನು ಈ ಬಾರಿಯೂ ಸಿಎಂ ಅನುಸರಿಸಿದ್ದಾರೆ ಎಂದರು.
ಈ ವಿಚಾರದಲ್ಲಿ ಹೊಸದಾಗಿ ಏನನ್ನೂ ಮಾಡಿಲ್ಲ. ಆದುದರಿಂದ ರಾಜಮಾತೆಯವರು ಬೇಸರಪಡುವ ಅಗತ್ಯವಿಲ್ಲ. ಒಂದು ವೇಳೆ ಅವರಿಗೆ ಯಾವುದಾದರೂ ರೀತಿಯಲ್ಲಿ ಅಸಮಾಧಾನ ಉಂಟಾಗಿದ್ದರೆ, ಅವರ ಬಳಿಗೆ ತೆರಳಿ ಮಾತನಾಡಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ವಿವರಣೆ ನೀಡಿದರು.
ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು: ಮಹರ್ಷಿ ವಾಲ್ಮೀಕಿ ಅನೇಕ ಆದರ್ಶಗಳು ಮತ್ತು ಜೀವನಮೌಲ್ಯಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅದನ್ನು ಸ್ಮರಿಸುವುದರ ಜೊತೆಗೆ ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ವಾಲ್ಮೀಕಿ ಅವರ ನೆನಪಿಗಾಗಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು.






