ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಶಕ್ತಿಕೇಂದ್ರವನ್ನಾಗಿಸುವುದು ನಮ್ಮ ಗುರಿ : ಡಾ.ಪರಮೇಶ್ವರ್

ಬೆಂಗಳೂರು : ಕರ್ನಾಟಕವನ್ನು ಭಾರತದ ಪ್ರಮುಖ ಹೂಡಿಕೆ ತಾಣವಷ್ಟೇ ಅಲ್ಲದೆ, ಜಾಗತಿಕ ಮಟ್ಟದ ನಾವೀನ್ಯತೆ, ಉತ್ಪಾದನೆ, ಉದ್ಯಮ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸುವುದು ಸರಕಾರದ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘2027ನೆ ಸಾಲಿನ ಜಾಗತಿಕ ಹೂಡಿಕೆದಾರರ ಸಮಾವೇಶ'ದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುವುದು ಸರಕಾರದ ಆದ್ಯತೆಯಾಗಿದೆ ಎಂದರು.
2025ರ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಬದ್ಧತೆಗಳು ವ್ಯಕ್ತವಾಗಿದ್ದು, ಆರು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳ ಸೃಷ್ಟಿಯ ನಿರೀಕ್ಷೆಯಿದೆ. ಈ ವರ್ಷದ ಸೆಪ್ಟೆಂಬರ್‍ನಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿಯ ಸಭೆಯಲ್ಲಿ ಸುಮಾರು 29,700 ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 66 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಮತ್ತೊಂದು 147 ಕೈಗಾರಿಕಾ ಯೋಜನೆಗಳಿಗೆ ಸುಮಾರು 6,826 ಕೋಟಿ ರೂ. ಹೂಡಿಕೆಯೊಂದಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರಭಾಗದಲ್ಲಿ ಸ್ಥಾಪನೆಯಾಗಲಿವೆ. ಇದು ರಾಜ್ಯದಲ್ಲಿ ಸಮತೋಲಿತ ಹಾಗೂ ಪ್ರಾದೇಶಿಕ ಕೈಗಾರಿಕಾ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
ಬೆಂಗಳೂರು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಮುಂದುವರಿಯಲಿದೆ. ಆದರೆ ರಾಜ್ಯದ ಆರ್ಥಿಕ ಪ್ರಗತಿ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ಕಲಬುರಗಿ, ಬೆಳಗಾವಿ, ತುಮಕೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ಯುವಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಉದ್ಯೋಗ ಮತ್ತು ಉದ್ಯಮಾವಕಾಶಗಳು ದೊರೆಯಬೇಕು. ಈ ನಿಟ್ಟಿನಲ್ಲಿ ‘ಬೆಂಗಳೂರು ಮೀರಿದ ಅಭಿವೃದ್ಧಿ' ಪರಿಕಲ್ಪನೆಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ತುಮಕೂರು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯುವ ನಿರೀಕ್ಷೆ: ತುಮಕೂರು ಜಿಲ್ಲೆಯನ್ನು ಕರ್ನಾಟಕದ ಪ್ರಮುಖ ಕೈಗಾರಿಕಾ ತಾಣವನ್ನಾಗಿ ರೂಪಿಸುವ ಅಪಾರ ಅವಕಾಶಗಳಿವೆ. ಬೆಂಗಳೂರಿಗೆ ಸಮೀಪ, ರಾಷ್ಟ್ರೀಯ ಹೆದ್ದಾರಿ 48ರ ಸಂಪರ್ಕ, ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಸೌಲಭ್ಯ ಹಾಗೂ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‍ನಲ್ಲಿರುವ ಸ್ಥಾನ ಜಿಲ್ಲೆಗೆ ಅನುಕೂಲಕರವಾಗಿದೆ ಎಂದು ಅವರು ವಿವರಿಸಿದರು.
ಹಂತ ಹಂತವಾಗಿ ಸುಮಾರು 8,484 ಎಕರೆ ಪ್ರದೇಶದಲ್ಲಿ ರೂಪಿಸಲಾಗುತ್ತಿರುವ ಕೈಗಾರಿಕಾ ಟೌನ್‍ಶಿಪ್, ವಸಂತನರಸಾಪುರ ಕೈಗಾರಿಕಾ ಪ್ರದೇಶ ಮತ್ತು ಮೆಷಿನ್ ಟೂಲ್ ಪಾರ್ಕ್‍ಗಳು ಹೂಡಿಕೆಗೆ ಬಲವಾದ ಅಡಿಪಾಯ ಒದಗಿಸಲಿವೆ. ನಿಖರ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು, ಏರೋಸ್ಪೇಸ್, ಔಷಧ ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಿಸುವ ಗುರಿಯಿದೆ ಎಂದು ಪರಮೇಶ್ವರ್ ಹೇಳಿದರು.
2025-30ರ ಕೈಗಾರಿಕಾ ನೀತಿಯಡಿ 7.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸುವ ಮತ್ತು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಉದ್ಯಮಗಳಿಗೆ ತ್ವರಿತ ಅನುಮೋದನೆ, ಉತ್ತಮ ಮೂಲಸೌಕರ್ಯ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗ, ಹಸಿರು ಉತ್ಪಾದನೆ ಹಾಗೂ ನವೀನ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ದೇಶ-ವಿದೇಶಗಳ ಉದ್ಯಮಿಗಳಿಗೆ ಆಹ್ವಾನ ನೀಡಿದ ಅವರು, ಜಾಗತಿಕ ಹೂಡಿಕೆಗಳು ಸ್ಥಳೀಯ ಉದ್ಯೋಗಾವಕಾಶಗಳಾಗಿ ಪರಿವರ್ತನೆಯಾಗಬೇಕು. ನಾವೀನ್ಯತೆ ಕೈಗಾರಿಕಾ ಸಮೃದ್ಧಿಗೆ ದಾರಿ ಮಾಡಿಕೊಡಬೇಕು ಹಾಗೂ ಆರ್ಥಿಕ ಬೆಳವಣಿಗೆಯ ಫಲ ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ತಲುಪಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ತಿಳಿಸಿದರು.






