ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್ ಆರ್ಕೈವ್ಸ್ ಸ್ಥಾಪಿಸಿ: ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ ಕಲೆಯ ಅಪೂರ್ವ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ(ಯಕ್ಷಗಾನ ಆರ್ಕೈವ್ಸ್) ಸ್ಥಾಪಿಸುವ ಯೋಜನೆಯನ್ನು ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಘೋಷಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ.ಪುರುಷೋತ್ತಮ ಬಿಳಿಮಲೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸುವ ಕ್ರಮವು ಯಕ್ಷಗಾನದ ತವರೂರಾದ ಕರಾವಳಿಯ ಅಸ್ಮಿತೆಗೆ ನೀಡುವ ಗೌರವ ಮಾತ್ರವಲ್ಲ, ಅದು ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸರಕಾರದ ಬದ್ಧತೆಯ ಪ್ರತೀಕವೂ ಆಗಲಿದೆ ಎಂದು ಹೇಳಿದ್ದಾರೆ.
ಯಕ್ಷಗಾನವು ಕೇವಲ ಒಂದು ಪ್ರದರ್ಶನ ಕಲೆಯಲ್ಲ. ಕುಣಿತ, ಹಾಡುಗಾರಿಕೆ, ಮಾತುಗಾರಿಕೆ ಮತ್ತು ವರ್ಣರಂಜಿತ ವೇಷಭೂಷಣಗಳ ಸಮನ್ವಯದಿಂದ ರೂಪುಗೊಂಡಿರುವ ಪರಿಪೂರ್ಣ ಕಲೆಯಾಗಿದೆ. ಇದು ಕರಾವಳಿ ಕರ್ನಾಟಕದ ಜನ-ಜೀವನ, ಸಾಹಿತ್ಯ, ಆಚರಣೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಈ ಕಲೆಗೆ ದೊರೆಯುವ ಗೌರವವು ಇಡೀ ಕರಾವಳಿಯನ್ನು ಪ್ರಭಾವಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಉದ್ದೇಶಿತ ಡಿಜಿಟಲ್ ಸಂಗ್ರಹಾಲಯವು ಯಕ್ಷಗಾನದ ಧ್ವನಿ ಮತ್ತು ದೃಶ್ಯ ದಾಖಲೆಗಳ ಸಂಗ್ರಹವಾಗಲಿದೆ. ಇಲ್ಲಿ ಕಲೆಯ ಅಪರೂಪದ ಪ್ರಸಂಗಗಳ ಸಂರಕ್ಷಣೆ, ಸಂಗ್ರಹದ ವೈಜ್ಞಾನಿಕ ವರ್ಗೀಕರಣ, ಸಂಶೋಧನೆ ಮತ್ತು ಮುಂದಿನ ಪೀಳಿಗೆಗೆ ಯಕ್ಷಗಾನ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆ ರೂಪಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಮಹತ್ವದ ಯೋಜನೆ ಜಾರಿಯಾದರೆ ಯಕ್ಷಗಾನ ಸಂಶೋಧನೆಗೆ ಹೊಸ ಆಯಾಮವು ದೊರೆಯುತ್ತದೆ. ಇದರಿಂದ ಇಡೀ ಕರಾವಳಿ ಪ್ರದೇಶವು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಮತ್ತು ಕರಾವಳಿ ಕರ್ನಾಟಕವು ಯಕ್ಷಗಾನದ ಸಾಂಸ್ಕೃತಿಕ ಭಂಡಾರವಾಗಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಯಕ್ಷಗಾನ ಆರ್ಕೈವ್ಸ್ ಸ್ಥಾಪನೆಗೆ ಅಂದಾಜು 10 ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಈ ಪ್ರಸ್ತಾವನೆಯನ್ನು ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಪರಿಗಣಿಸಿದಲ್ಲಿ ಆ ಭಾಗದ ಸಾಂಸ್ಕೃತಿಕ ಅಸ್ಮಿತೆಗೆ ಸರಕಾರವು ಅರ್ಥಪೂರ್ಣವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಬಿಳಿಮಲೆ ಪ್ರತಿಪಾದಿಸಿದ್ದಾರೆ.






