ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿ: ಡಾ.ಶಾಲಿನಿ ರಜನೀಶ್

ಬೆಂಗಳೂರು : ವಿಶ್ವ ಸಂಸ್ಥೆಯು ಗೊತ್ತು ಮಾಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಆಯೋಜಿಸಿದ್ದ ‘ಸರಕಾರಿ ಗ್ಯಾರೆಂಟಿ ಯೋಜನೆಗಳ ಸಂಶೋಧನಾ ಫಲಿತಾಂಶಗಳ’ ಸಾರ್ವಜನಿಕ ಪ್ರಸರಣ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ನಿರ್ಮೂಲನೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೊದಲನೆಯದಾಗಿದ್ದು, ಕರ್ನಾಟಕ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ತಲಾದಾಯ ಹೊಂದಿರುವ ರಾಜ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಇದು ಸಾಧ್ಯವಾಗಿದೆ. ಹಸಿವು ಮುಕ್ತ, ಪೌಷ್ಟಿಕ ಆಹಾರವೂ ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಪೌಷ್ಟಿಕತೆ ಮಟ್ಟ ಸುಧಾರಿಸಿದೆ. ಯುವನಿಧಿ ಮೂಲಕ ಗುಣಮಟ್ಟದ ಶಿಕ್ಷಣವನ್ನು ಅರ್ಥಪೂರ್ಣವಾಗಿದೆ. ಕೌಶಲ್ಯ ತರಬೇತಿ ಹಾಗೂ ಹಣಕಾಸಿನ ನೆರವು ಒದಗಿಸುವ ಮೂಲಕ ಶೇ.100ರಷ್ಟು ಉದ್ಯೋಗವನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಲಿಂಗ ಸಮಾನತೆಯೂ ಒಂದಾಗಿದೆ. ಸರಕಾರ ಮಹಿಳಾ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿರುವ ಕಾರಣ ಎರಡು ವರ್ಷಗಳಲ್ಲಿ ಮಹಿಳಾ ಸಹಭಾಗಿತ್ವ ಶೇ.37ಗೆ ಏರಿಕೆಯಾಗಿದೆ. ಮಹಿಳೆಯರಿಗೆ ಹೊಣೆಗಾರಿಕೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದರೆ ಇಡೀ ಕುಟುಂಬ ಹಾಗೂ ಸಮಾಜವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ಇದು ರುಜುವಾತು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚೆನ್ನೈನ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳಾಗಿ ಮಾಡುತ್ತದೆ ಎಂಬುದು ಸುಳ್ಳು. ಈ ಯೋಜನೆಗಳಿಂದ ಬರುತ್ತಿರುವ ಹಣವನ್ನು ಜನರು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಕಾಪಾಡಿಕೊಳ್ಳಲು, ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸುತ್ತಿರುವುದು ಸಮೀಕ್ಷೆಯಿಂದ ಸಾಭೀತಾಗಿದೆ. ಅನ್ನ ಭಾಗ್ಯವು ಬಡಜನರ ಹಸಿವನ್ನು ನಿವಾರಿಸಿದೆ. ಯುವನಿಧಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಜೊತೆಗೆ ಉದ್ಯೋಗವನ್ನು ಹುಡುಕಲು ನೆರವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ ಕುಮಾರ್ ಸಿಂಗ್, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಉಪಾಧ್ಯಕ್ಷ ಮೆಹರೂಜ್ ಖಾನ್, ದಿನೇಶ್ ಗೂಳಿಗೌಡ ಮತ್ತಿತರರು ಇದ್ದರು.
ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು: ಕಾರ್ಯಕ್ರಮದಲ್ಲಿ ಸಮೀಕ್ಷೆಯ ವರದಿಗಳನ್ನು ಬಿಡುಗಡೆ ಮಾಡಲಾಯಿತು. ಕಿಂಗ್ಸ್ ಕಾಲೇಜ್ ಲಂಡನ್ ಅವರು ಮಾಡಿರುವ ಸಮೀಕ್ಷೆಯ ಪ್ರಕಾರ ಗೃಹಲಕ್ಷ್ಮೀ ಯೋಜನೆಯ ಶೇ.99.8ರಷ್ಟು ಫಲಾನುಭವಿಗಳು ತಮಗೆ ಸರಕಾರ ನೀಡುತ್ತಿರುವ ಮಾಸಿಕ 2000 ರೂ. ನಗದು ಸಂಪೂರ್ಣವಾಗಿ ಬರುತ್ತಿದೆ ಎಂದಿದ್ದಾರೆ.
ಶೇ.78ರಷ್ಟು ಫಲಾನುಭವಿಗಳು ಹಣ ಒಂದು ಅಥವಾ ಅದಕ್ಕಿಂತ ಹೆಚ್ಚು ತಿಂಗಳಷ್ಟು ವಿಳಂಬವಾಗಿ ಬರುತ್ತಿದೆ ಎಂದಿದ್ದಾರೆ. ಹಾಗೆಯೇ ಶೇ.99ರಷ್ಟು ಫಲಾನುಭವಿಗಳು ತಮಗೆ ಬರುವ ಹಣವನ್ನು ಖರ್ಚು ಮಾಡುವ ಅಧಿಕಾರ ತಮಗೇ ಇದೆ ಎಂದಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಹೆಚ್ಚಿನ ಫಲಾನುಭವಿಗಳು ಆಹಾರ(ಶೇ.78), ಕುಟುಂಬ ನಿರ್ವಹಣೆ ವೆಚ್ಚಗಳು(ಶೇ.54), ಔಷಧಿಗಳು(ಶೇ.48) ಹಾಗೂ ಮಕ್ಕಳ ಶಿಕ್ಷಣ ವೆಚ್ಚಗಳಿಗೆ(ಶೇ.28) ಬಳಸುತ್ತಿರುವುದು ಕಂಡುಬಂದಿದೆ. ಫಲಾನುಭವಿ ಮಹಿಳೆಯರಲ್ಲಿ ಯೋಜನೆ ಜಾರಿಯ ನಂತರ ಬ್ಯಾಂಕ್ ಖಾತೆ ಹೊಂದಿದವರ ಸಂಖ್ಯೆ ಶೇ.8ರಷ್ಟು ಜಾಸ್ತಿಯಾಗಿದೆ. ಹಾಗೆಯೇ, ತಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸುತ್ತಿರುವವರ ಸಂಖ್ಯೆ ಶೇ.15ರಷ್ಟು ಹೆಚ್ಚಳವಾಗಿದೆ.
ಅನ್ನಭಾಗ್ಯ ಯೋಜನೆ: ಇಂದಿರಾ ಕಿಟ್ ನೀಡುವ ಸರಕಾರದ ಇತ್ತೀಚಿನ ನಿರ್ಧಾರ ಸೂಕ್ತ ಎಂದಿದ್ದಾರೆ. ಗೃಹ ಜ್ಯೋತಿ ಯೋಜನೆ: ಶೇ.89ರಷ್ಟು ಫಲಾನುಭವಿಗಳು ಯೋಜನೆಯಿಂದಾಗಿ ವಿದ್ಯುತ್ ಬಿಲ್ ಗಾಗಿ ಪಾವತಿಸುತ್ತಿದ್ದ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ. ಶೇ.94ರಷ್ಟು ಫಲಾನುಭವಿಗಳು ಉಳಿತಾಯದ ಹಣವನ್ನು ಕುಟುಂಬ ನಿರ್ವಹಣೆ ವೆಚ್ಚಕ್ಕಾಗಿ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.
ಶಕ್ತಿ ಯೋಜನೆ: ಶಕ್ತಿ ಉಚಿತ ಬಸ್ ಸೇವೆ ಯೋಜನೆಯಿಂದಾಗಿ ಶೇ.43.1ರಷ್ಟು ಮಹಿಳೆಯರಿಗೆ ಹಣದ ಉಳಿತಾಯ ಸಾಧ್ಯವಾಗಿದೆ. ಹೀಗೆ ಉಳಿದ ಹಣವನ್ನು ಮುಖ್ಯವಾಗಿ ಕುಟುಂಬ ನಿರ್ವಹಣೆ ವೆಚ್ಚ ಹಾಗೂ ಮಕ್ಕಳಿಗಾಗಿ ಬಳಸುತ್ತಿದ್ದಾರೆ. ಶೇ.92.9ರಷ್ಟು ಮಹಿಳೆಯರು ಪ್ರಯಾಣಕ್ಕಾಗಿ ಕುಟುಂಬದ ಮೇಲಿನ ಅವಲಂಬನೆಯ ತಗ್ಗಿದೆ. ಶೇ.10.5ರಷ್ಟು ಮಹಿಳೆಯರು ಶಕ್ತಿ ಯೋಜನೆ ಜಾರಿಯಾದ ನಂತರ ಉದ್ಯೋಗಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದ ಅಧ್ಯಯನದ ಪ್ರಕಾರ ಗ್ಯಾರಂಟಿ ಯೋಜನೆ ಜಾರಿಗೊಂಡ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮಹಿಳೆಯರು ಹಾಗೂ ಪುರುಷ ಪ್ರಯಾಣಿಕರ ಅನುಪಾತವು 60:40 ರಷ್ಟಿದೆ. ಇದು ಮಹಿಳೆಯರಿಗೆ ಸಾರ್ವಜನಿಕ ಸಂಚಾರದ ಲಭ್ಯತೆ ಹೆಚ್ಚಾಗಿರುವುದುನ್ನು ಸೂಚಿಸುತ್ತದೆ.







