ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಎಐ ಪಠ್ಯ ಕ್ರಮ ಅಳವಡಿಕೆ : ಡಾ.ಶಾಲಿನಿ ರಜನೀಶ್

ಬೆಂಗಳೂರು : ಜಾಗತಿಕ ಬೇಡಿಕೆಯನ್ನು ಪೂರೈಸಲು ಭವಿಷ್ಯದಲ್ಲಿ ಸಿದ್ಧವಾಗಿರುವ ಕಾರ್ಯಪಡೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಎಐ ಪಠ್ಯ ಕ್ರಮವನ್ನು ಅಳವಡಿಸುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.
ಮಂಗಳವಾರ ನಗರದ ಐಐಎಸ್‍ಸಿಯ ಎವಿ ರಾಮರಾವ್ ಸಭಾಂಗಣದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಉನ್ನತ ಮಟ್ಟದ ಎಐ ಇಂಪ್ಯಾಕ್ಟ್ ಪೂರ್ವ-ಸಮ್ಮಿಟ್ ಕಾರ್ಯಪಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಗಾಗಿ ಮಾರ್ಗಸೂಚಿಯನ್ನು ರೂಪಿಸಲು ಈ ಅಧಿವೇಶನವು ಹಿರಿಯ ಸರಕಾರಿ ಅಧಿಕಾರಿಗಳು, ಉದ್ಯಮ ಮುಖಂಡರು, ಶೈಕ್ಷಣಿಕ ತಜ್ಞರನ್ನು ಒಟ್ಟುಗೂಡಿಸಲು ಒಂದು ವೇದಿಕೆಯಾಗಿದೆ ಎಂದರು.
ಬೆಳೆ ಆರೋಗ್ಯ ಮತ್ತು ಮಣ್ಣಿನ ಪೋಷಕಾಂಶಗಳ ಡೇಟಾವನ್ನು ಸಂಯೋಜಿಸುವ ಮೂಲಕ, 6 ಸಾವಿರ ಗ್ರಾಮ ಪಂಚಾಯತ್‍ಗಳಲ್ಲಿ, 300 ಗ್ರಾಮ ಪಂಚಾಯತ್‍ಗಳಿಗೆ ಮಾತ್ರ ನಿರ್ದಿಷ್ಟ ಪೌಷ್ಟಿಕಾಂಶದ ಮಧ್ಯಸ್ಥಿಕೆಗಳು ಬೇಕಾಗುತ್ತವೆ ಎಂದು ನಾವು ಕಂಡುಕೊಂಡಿದ್ದು. ಈ ನಿಖರತೆಯು ರಸಗೊಬ್ಬರಗಳ ಸರಿಯಾದ ಹಂಚಿಕೆ, ವ್ಯರ್ಥವನ್ನು ತಡೆಗಟ್ಟುವುದು, ಸಂಪನ್ಮೂಲಗಳನ್ನು ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಸರಕಾರಿ ಯೋಜನೆಗಳು ಮತ್ತು ಯೋಜನೆಯ ಅರ್ಹತಾ ಮಾನದಂಡಗಳ ಸಂಕೀರ್ಣತೆಯನ್ನು ಪರಿಹರಿಸುವ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವುದು, ನಾಗರಿಕರು ನೈಸರ್ಗಿಕ ಭಾಷೆಯಲ್ಲಿ ಸರಕಾರಿ ವೆಬ್ ಸೈಟ್‍ಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಧ್ವನಿ-ಸಕ್ರಿಯಗೊಳಿಸಿದ ಎ.ಐ ಇಂಟರ್ಫೇಸ್‍ಗಳಿಗಾಗಿ ಒಂದು ದೃಷ್ಟಿಕೋನವನ್ನು ರಚಿಸಲಾಗಿದೆ. ಕಟ್ಟುನಿಟ್ಟಾದ ಗೌಪ್ಯತೆ ಮತ್ತು ರಾಜ್ಯ ನಿಯಮಗಳಿಗೆ ಬದ್ಧವಾಗಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲಾಗುತ್ತದೆ ಎಂದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಇ-ಆಡಳಿತ) ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ‘ಬೆಂಗಳೂರು ಲಾಭಾಂಶ’ವನ್ನು ಪರಿಚಯಿಸಿದರು. ನೀರಿನ ಅವಶ್ಯಕತೆಗಳಿಗೆ ಅನುಗುಣವಾಗಿ ಬೆಳೆ ಡೇಟಾವನ್ನು ನಕ್ಷೆ ತಯಾರು ಮಾಡಲು ನಾವು ಎ.ಐ ಅನ್ನು ಬಳಸಿಕೊಳ್ಳುವುದರಿಂದ ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಬಹುದು. ಮಣ್ಣಿನ ಸವೆತವನ್ನು ಕಡಿಮೆ ಮಾಡಬಹುದು ಮತ್ತು ಸಬ್ಸಿಡಿ ಹೊರೆಯನ್ನು ಗಮನಾರ್ಹವಾಗಿ ತರ್ಕಬದ್ಧಗೊಳಿಸಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಸಚಿವಾಲಯ ಜಂಟಿ ಕಾರ್ಯದರ್ಶಿ ಶಶಾಂಕ್ ಮಿಶ್ರಾ, ವಿಜ್ಞಾನಿ ಅಭಿಷೇಕ್ ಅಗರ್ವಾಲ್ ಸೇರಿದಂತೆ ಇತರರು ಭಾಗವಹಿಸಿದ್ದರು.







