ಬರದ ಸವಾಲು ಎದುರಿಸಲು ಕಾರ್ಯತಂತ್ರ : ಡಾ.ಶಾಲಿನಿ ರಜನೀಶ್

ಬೆಂಗಳೂರು : ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಪೀಡಿತ ಪ್ರದೇಶಗಳನ್ನು ಹೊಂದಿರುವ ರಾಜ್ಯವಾಗಿದ್ದು, ಹವಾಮಾನ ವೈಪರೀತ್ಯ, ಅನಿಯಮಿತ ಮುಂಗಾರು, ಎಲ್‍ನಿನೋ ಪರಿಣಾಮ ಹಾಗೂ ಅಂತರ್ಜಲ ಮಟ್ಟದ ಕುಸಿತದಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಲು ರಾಜ್ಯ ಸರಕಾರ ಕಾರ್ಯತಂತ್ರ ರೂಪಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಜಲಸಂರಕ್ಷಣೆ ಮತ್ತು ಜೀವನೋಪಾಯ ಕಾಮಗಾರಿಗಳು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿವೆ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಖಾತರಿಯಡಿ ಜಲಸಂರಕ್ಷಣೆಯ ಮೈಲಿಗಲ್ಲು(2021-22 ರಿಂದ 2025-26): ಕಳೆದ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಪ್ರಮುಖ ಕಾಮಗಾರಿಗಳು ಗ್ರಾಮೀಣ ಪ್ರದೇಶದ ನೀರಿನ ಅಭಾವವನ್ನು ತಗ್ಗಿಸುವಲ್ಲಿ ಗಮನಾರ್ಹ ಯಶಸ್ಸು ಕಂಡಿವೆ. 1,40,411 ಕೃಷಿ ಹೊಂಡಗಳ ನಿರ್ಮಾಣ. 1,25,785 ಕೆರೆ, ಕಾಲುವೆ ಹಾಗೂ ಫೀಡರ್ ಚಾನಲ್‍ಗಳ ಹೂಳೆತ್ತುವಿಕೆ ಕಾಮಗಾರಿ ಮಾಡಲಾಗಿದೆ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
41,061 ಚೆಕ್ ಡ್ಯಾಂಗಳ ನಿರ್ಮಾಣ. 6,005 ಮಳೆನೀರು ಸಂಗ್ರಹಣೆ ಹಾಗೂ ಇಂಗುಗುಂಡಿ ನಿರ್ಮಾಣ. 1,774 ಬೋರ್‍ವೆಲ್ ರೀಚಾರ್ಜ್ ಘಟಕಗಳ ಸ್ಥಾಪನೆ. 3,303 ವೈಯಕ್ತಿಕ ಹುಲ್ಲು ಹಾಗೂ ಮೇವು ಅಭಿವೃದ್ಧಿ ಕಾಮಗಾರಿಗಳು. ಈ ಕಾಮಗಾರಿಗಳಿಂದ ಒಣಗಿದ್ದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರೈತರು ಮಳೆಯನ್ನಷ್ಟೇ ಅವಲಂಬಿಸದೇ ಬಹುಬೆಳೆ ಪದ್ಧತಿ ಹಾಗೂ ತೋಟಗಾರಿಕೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ಗ್ರಾಮ ಮಟ್ಟದಲ್ಲಿ ನಿರಂತರ ಉದ್ಯೋಗ ದೊರೆತ ಪರಿಣಾಮ ನಗರಗಳಿಗೆ ವಲಸೆ ಹೋಗುವುದು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ವಿಬಿ-ಜಿ ರಾಮ್ ಜಿ ಯೋಜನೆಯಡಿ 9,429.20 ಕೋಟಿ ಬೃಹತ್ ಅನುದಾನ: ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ಗ್ರಾಮೀಣ) ಯೋಜನೆಯಡಿ 2026-27ನೇ ಸಾಲಿನಲ್ಲಿ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು 5,657.52 ಕೋಟಿ ರೂ. ಹಾಗೂ ರಾಜ್ಯ ಸರಕಾರವು 3,771.68 ಕೋಟಿ ರೂ. ಸೇರಿ ಒಟ್ಟು 9,429.20 ಕೋಟಿ ರೂ.ಗಳಷ್ಟು ಬೃಹತ್ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಜಲ ಸಂರಕ್ಷಣೆ ಮತ್ತು ಕೃಷಿ: ವೈಯಕ್ತಿಕ ಕೃಷಿ ಹೊಂಡ, ರೀಚಾರ್ಜ್ ಪಿಟ್, ಕಲ್ಲಿನ ಚೆಕ್ ಡ್ಯಾಂ, ಕಾಂಟೂರ್ ಟ್ರೆಂಚ್, ಇಂಜೆಕ್ಷನ್ ವೆಲ್ ಹಾಗೂ ನೀರಾವರಿ ಕಾಲುವೆಗಳ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಪಶುಸಂಗೋಪನೆ ಮತ್ತು ಜೀವನಾಧಾರ: ವೈಯಕ್ತಿಕ/ಸಮುದಾಯ ದನದ ಕೊಟ್ಟಿಗೆ, ಆಡು/ಕುರಿ ಶೆಡ್, ಕೋಳಿ ಹಾಗೂ ಹಂದಿ ಸಾಕಣೆ ಶೆಡ್, ಪಶು ವೈದ್ಯಕೀಯ ಚಿಕಿತ್ಸಾಲಯ, ಕುಡಿಯುವ ನೀರಿನ ಪಶು ತೊಟ್ಟಿ ಹಾಗೂ ಹಾಲು ಸಂಗ್ರಹಣಾ ಕೇಂದ್ರ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಮೀನುಗಾರಿಕೆ ಇಲಾಖೆಯಡಿ ಸಮುದಾಯ ಮೀನು ಸಾಕಣೆ ಕೊಳಗಳು, ಮೀನು ಒಣಗಿಸುವ ಅಂಗಳ ಹಾಗೂ ಸಿಗಡಿ, ಮೀನು, ಏಡಿ ಸಾಕಣೆಗಾಗಿ ಅಕ್ವಾಕಲ್ಚರ್ ರಚನೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸಂಜೀವಿನಿ-ಎನ್‍ಆರ್‍ಎಲ್‍ಎಂ (ಮಹಿಳಾ ಸಬಲೀಕರಣ): ಸ್ವಸಹಾಯ ಗುಂಪುಗಳಿಗೆ (ಎಸ್‍ಎಚ್‍ಜಿ) ವರ್ಕ್‍ಶೆಡ್, ಕೌಶಲ್ಯ ತರಬೇತಿ ಕೇಂದ್ರ ಹಾಗೂ ಸ್ವಸಹಾಯ ಗುಂಪುಗಳ ಉತ್ಪನ್ನ ಮಾರಾಟಕ್ಕಾಗಿ ‘ಶೀ-ಮಾರ್ಟ್’ ಮಳಿಗೆಗಳ ನಿರ್ಮಾಣ ಮಾಡಲಾಗುವುದು. ಅದೇ ರೀತಿ, ರೇಷ್ಮೆ ಕೃಷಿ ಮತ್ತು ಕರಾವಳಿ ಅಭಿವೃದ್ಧಿ ಇಲಾಖೆಯಡಿ ಮಲ್ಬರಿ (ಹಿಪ್ಪುನೇರಳೆ) ನೆಡುಥೋಪು ಹಾಗೂ ಕರಾವಳಿ ತೀರದಲ್ಲಿ ಮಣ್ಣು ಸವೆತ ತಡೆಯಲು ಬ್ರಷ್ ವುಡ್ ಗುಲ್ಲಿ ಪ್ಲಗ್ ಮತ್ತು ತೀರಪ್ರದೇಶದ ನೆಡುಥೋಪು ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ, ಸರಕಾರದ ಈ ಯೋಜನೆಗಳ ಲಾಭವನ್ನು ಪಡೆದು ನಿಮ್ಮ ಉಪಜೀವನಕ್ಕೆ ಹೊಸ ಆಯಾಮ ನೀಡಲು ಪ್ರತಿಯೊಬ್ಬ ಗ್ರಾಮೀಣ ನಾಗರಿಕರು ಮುಂದೆ ಬರಬೇಕು. ಗ್ರಾಮಗಳಿಂದ ನಗರಗಳಿಗೆ ಗುಳೆ ಹೋಗುವುದನ್ನು ತಡೆದು, ಸ್ಥಳೀಯವಾಗಿಯೇ ಆರ್ಥಿಕ ಸ್ವಾವಲಂಬನೆ ಸಾಧಿಸಲು ನಿಮ್ಮ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಉದ್ಯೋಗ ಖಾತರಿ ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾರ್ಗದರ್ಶನ ಪಡೆಯುವಂತೆ ಶಾಲಿನಿ ರಜನೀಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






