ಕೌಟುಂಬಿಕ ಬಾಂಧವ್ಯ ಬಲಪಡಿಸಲು ‘ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆ ಜಾರಿ : ಡಾ.ಶಾಲಿನಿ ರಜನೀಶ್

ಬೆಂಗಳೂರು : ರಾಜ್ಯದಲ್ಲಿ ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ (ತೇರೆ-ಮೇರೇ ಸಪ್ನೆ) ‘ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ನಗರದ ಜವಾಹರ್ ಬಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಮದುವೆಗೆ ಮುನ್ನ ಯುವಜನರಲ್ಲಿ ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಹಾಗೂ ಧನಾತ್ಮಕ ಸಂವಹನ ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದ 178 ಸಾಂತ್ವನ ಕೇಂದ್ರಗಳ ಮೂಲಕ ವಿವಾಹ ಪೂರ್ವ ಸಂವಹನ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಉಚಿತ ಸಮಾಲೋಚನೆ ಒದಗಿಸುವ ಮೂಲಕ ಕುಟುಂಬ ಸಂಸ್ಥೆಯನ್ನು ಬಲಪಡಿಸಲು ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ತಿಳಿಸಿದರು.
ಯುವಜನರು ಮದುವೆಗೂ ಮುನ್ನ ಅಗತ್ಯ ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಮಾಡುವುದು ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ನಿರ್ದೇಶಕಿ ಸ್ನೇಹ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ರೂಪ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಯ ಪ್ರಮುಖ ಉದ್ದೇಶಗಳು: ಮದುವೆಗೆ ಮುನ್ನ ನಿರೀಕ್ಷಿತ ದಂಪತಿಗಳ ನಡುವೆ ಪರಸ್ಪರ ತಿಳುವಳಿಕೆ, ಗೌರವ ಮತ್ತು ಭಾವನಾತ್ಮಕ ಸಿದ್ಧತೆಯನ್ನು ಬೆಳೆಸುವುದು. ಆರ್ಥಿಕ ಹಾಗೂ ಮಾನಸಿಕ ಜಾಗೃತಿ: ಜವಾಬ್ದಾರಿಗಳ ಹಂಚಿಕೆ, ಆರ್ಥಿಕ ನಿರ್ವಹಣೆ ಮತ್ತು ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ರಚನಾತ್ಮಕ ಸಮಾಲೋಚನೆ ನಡೆಸುವುದು. ಪ್ರಬುದ್ಧ ಸಂವಾದ ಹಾಗೂ ವೃತ್ತಿಪರ ಮಾರ್ಗದರ್ಶನದ ಮೂಲಕ ಅನಗತ್ಯ ಕೌಟುಂಬಿಕ ಕಲಹಗಳನ್ನು ತಡೆದು, ಲಿಂಗ-ಸೂಕ್ಷ್ಮ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸುವುದು. ‘ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆಯ ಉದ್ದೇಶವಾಗಿದೆ.






