ಆರ್‌ಟಿಇ ಸಮಗ್ರ ಜಾರಿಗೆ ಲಿಖಿತ ಭರವಸೆಗೆ ಆಗ್ರಹ; ಲಿಖಿತ ಭರವಸೆ ಸಿಗುವವರೆಗೂ ಫ್ರೀಡಂ ಪಾರ್ಕ್‌ನಿಂದ ಕದಲುವುದಿಲ್ಲ : ಡಾ.ವಿ.ಪಿ.ನಿರಂಜನಾರಾಧ್ಯ

ಬೆಂಗಳೂರು : ಶಿಕ್ಷಣ ದಾನವೂ ಅಲ್ಲ, ಭಿಕ್ಷೆಯೂ ಅಲ್ಲ, ಅದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸಮಗ್ರ ಜಾರಿಗೆ ಸಂಬಂಧಿಸಿದಂತೆ ಸರಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಫ್ರೀಡಂ ಪಾರ್ಕ್‌ನಿಂದ ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ ವತಿಯಿಂದ ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಆಗ್ರಹಿಸಿ ಹಾಗೂ ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಕ್ರಮವನ್ನು ವಿರೋಧಿಸಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೊಂದು ನಿರ್ಣಾಯಕ ಹೋರಾಟ. ನಿರ್ಣಾಯಕ ತೀರ್ಮಾನ ಕೈಗೊಳ್ಳದೆ ನಾವು ಈ ಜಾಗವನ್ನು ಬಿಟ್ಟು ಕದಲುವುದಿಲ್ಲ ಎಂದರು.
ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಮಾತನಾಡಿ, ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ. 2002ರ 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಅನುಚ್ಛೇದ 21ಎ ಸೇರ್ಪಡೆಗೊಳಿಸಿ, 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡಲಾಗಿದೆ. ಈ ಹಕ್ಕನ್ನು ಕಾರ್ಯರೂಪಕ್ಕೆ ತರಲು ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆ-2009-10ರ ಎ.1ರಿಂದ ಜಾರಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಧರಣಿಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆಯ ಮುಖಂಡರಾದ ಅಭಯ್ ಕುಮಾರ್, ಯೋಗಾನಂದ ಬಿ.ಎನ್, ಸ್ವರ್ಣ ಭಟ್, ಸರೋವರ್ ಬೆಂಕಿಕೆರೆ, ವೀಣಾ ನಾಯ್ಕ್, ಗಣೇಶ್, ಕೆ.ಆರ್.ಸೌಮ್ಯ, ಕಾತ್ಯಾಯಿನಿ, ಇತರರು ಭಾಗವಹಿಸಿದ್ದರು.






