ಧರ್ಮಸ್ಥಳ ಪ್ರಕರಣ | ತನಿಖೆಗೆ ಅಗತ್ಯಬಿದ್ದರೆ ಎಸ್‌ಐಟಿ ದಾಳಿ ನಡೆಸಲಿ : ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.26 : ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆಯಲ್ಲಿ ಅಗತ್ಯಬಿದ್ದರೆ ಯಾರ ಮೇಲೆ ಆದರೂ ಎಸ್‌ಐಟಿ ದಾಳಿ ನಡೆಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಹೇಶ್ ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ ವಿಚಾರವಾಗಿ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿ ನಡೆಸಲು ರಾಜ್ಯ ಸರಕಾರ ಎಸ್‌ಐಟಿಗೆ ಯಾವುದೇ ನಿರ್ದೇಶನ ನೀಡಲ್ಲ. ಅವರದ್ದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ಅಗತ್ಯಬಿದ್ದರೆ ಯಾರ ಮೇಲೆ ಆದರೂ ಎಸ್‌ಐಟಿ ದಾಳಿ ನಡೆಸಿ ವಿಚಾರಣೆಗೆ ಕರೆಯುತ್ತಾರೆ. ಆದರೆ, ಯಾರ ಮೇಲೆ ದಾಳಿ ಮಾಡುತ್ತಾರೆಂದು ನಮಗೆ ಹೇಳಲ್ಲ ಎಂದು ತಿಳಿಸಿದರು.
ರಾಜ್ಯ ಸರಕಾರ ರಚನೆ ಮಾಡಿರುವ ಎಸ್‌ಐಟಿ ತಂಡವೇ ಸಮರ್ಥವಾಗಿ ತನಿಖೆ ನಡೆಸುತ್ತಿದೆ. ಹೀಗಾಗಿ, ಎನ್‌ಐಎ ತನಿಖೆಯ ಅಗತ್ಯತೆ ಇಲ್ಲಿ ಕಂಡುಬರುವುದಿಲ್ಲ. ಅದರಲ್ಲೂ ಶೀಘ್ರದಲ್ಲಿಯೇ ಎಸ್‌ಐಟಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಎಸ್‌ಐಟಿ ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಆದರೆ, ಬಿಜೆಪಿಗರು ಯಾವ ಆಧಾರದ ಮೇಲೆ ಸರಕಾರವನ್ನು ತಪ್ಪಿತಸ್ಥರೆಂದು ಹೇಳುತ್ತಾರೆ. ಎಲ್ಲ ರೀತಿಯ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಎಸ್‌ಐಟಿ ಮಾಡಿದ್ದೇ ಷಡ್ಯಂತ್ರ ಎಂದು ಹೇಳುವುದು ಸೂಕ್ತವಲ್ಲ. ಕೋಟ್ಯಂತರ ಭಕ್ತರು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂಬುದಕ್ಕೆ ಎಸ್‌ಐಟಿ ರಚಿಸಲಾಗಿದೆ ಎಂದರು.







