ಖಾಲಿ ಹುದ್ದೆಗಳ ಭರ್ತಿ, ಭಡ್ತಿ ಪ್ರಕ್ರಿಯೆ ಚುರಕುಗೊಳಿಸಲು ಡಿಸಿಎಂ ಪರಮೇಶ್ವರ್ ಸೂಚನೆ

ಬೆಂಗಳೂರು, ಜೂ.22: ಕಂದಾಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯಕ ಆಯುಕ್ತರಿಗೆ (AC) ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.
ವಿಧಾನಸೌಧದಲ್ಲಿ ಇಂದು ಕಂದಾಯ ಇಲಾಖೆಯ ವಿವಿಧ ಯೋಜನೆಗಳು, ಆಡಳಿತಾತ್ಮಕ ಪ್ರಗತಿ ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ ಅವರು, ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.
ಪರವಾನಿಗೆ ಭೂಮಾಪಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕೆಂದು ಸೂಚಿಸಿದ ಡಿಸಿಎಂ, ಭೂಮಾಪಕರ ಸಭೆ ಕರೆದು ಅವರ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಆಲಿಸಬೇಕು. ಭೂಮಾಪಕರ ಸೇವಾ ಹಾಗೂ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು, ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಉಂಟಾಗಬಾರದು. ಜೇಷ್ಠತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಿ, ನಿಯಮಾನುಸಾರ ಪಾರದರ್ಶಕವಾಗಿ ಭಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಇ-ಪೌತಿ ಖಾತೆ ಸೇರಿದಂತೆ ಇಲಾಖೆಯ ಎಲ್ಲ ಆನ್ ಲೈನ್ ಮತ್ತು ಸಾರ್ವಜನಿಕ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಾಗರಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸೇವೆಗಳ ವಿತರಣೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಕಾಪಾಡಬೇಕು ಎಂದು ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಭೂ ದಾಖಲೆ, ಖಾತೆ ಬದಲಾವಣೆ, ಸರ್ವೇ ಕಾರ್ಯ, ಮ್ಯೂಟೇಷನ್ ಹಾಗೂ ಇತರ ಕಂದಾಯ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಬೇಕು.
ಇಲಾಖೆಯ ಎಲ್ಲಾ ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.






