ಬೆಂಗಳೂರು | ಪಾದಚಾರಿ ಮಾರ್ಗದಲ್ಲಿ ಚಾಲನೆ ಮಾಡುವವರ ಪರವಾನಗಿ ರದ್ದು

ಸಾಂದರ್ಭಿಕ ಚಿತ್ರ
ಬೆಂಗಳೂರು : ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸುವವರ ಪರವಾನಗಿ ರದ್ದುಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಪೊಲೀಸರು ಸಂಚಾರ ನಿಯಮ ಪಾಲನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ವಿಶೇಷ ಕಾರ್ಯಾಚರಣೆ ಕೈಗೊಂಡರೂ ಸಹ ನಗರದಲ್ಲಿ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲಿಯೂ ಸಂಚಾರ ದಟ್ಟಣೆ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಓಡಿಸುವವರನ್ನು ನಿತ್ಯವೂ ಕಾಣಬಹುದು. ಇದೀಗ ಅಂತಹ ವಾಹನ ಸವಾರರ ಪರಾವನಗಿ ರದ್ದುಗೊಳಿಸುವ ಅಸ್ತ್ರ ಪ್ರಯೋಗಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ದಂಡ ವಸೂಲಿ: ಮತ್ತೊಂದೆಡೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಳೆದ ಒಂದು ವಾರದಲ್ಲಿ ಬರೋಬ್ಬರಿ 1 ಸಾವಿರಕ್ಕೂ ಅಧಿಕ ಪ್ರಕರಣಗಳನ್ನ ದಾಖಲಿಸಿ, 2.30 ಲಕ್ಷ ರೂ ದಂಡ ವಿಧಿಸಿದ್ದಾರೆ.
ಜ.27ರಿಂದ ಫೆ.2ರವರೆಗೆ ನಗರದ 50 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ 62,300 ವಾಹನಗಳನ್ನು ಪರಿಶೀಲಿಸಿ, ಆ ಪೈಕಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 800 ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಅತಿವೇಗದ ಚಾಲನೆ ಮಾಡಿದ ನಿಯಮ ಉಲ್ಲಂಘಿಸಿದ 228 ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 2,30,000 ರೂ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.







