‘ಗಂಗಾಕಲ್ಯಾಣ ಕೊಳವೆಬಾವಿ’ ಗುರಿ ಹೆಚ್ಚಳಕ್ಕೆ ಅಗತ್ಯ ಕ್ರಮ : ಡಾ.ಮಹದೇವಪ್ಪ

ಬೆಂಗಳೂರು : ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವ ಭೌತಿಕ ಗುರಿ ಕಡಿಮೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಕೊಳವೆಬಾವಿಗಳ ಗುರಿಯ(ಟಾರ್ಗೆಟ್)ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ಸರಕಾರ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆಯ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಸುನೀಲಕುಮಾರ್, ಡಾ.ಚಂದ್ರು ಲಮಾಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಡಜನರನ್ನು ಮೆಲೆತ್ತುವ ಉದ್ದೇಶದಿಂದ ಗಂಗಾಕಲ್ಯಾಣ, ಭೂ ಒಡೆತನ ಯೋಜನೆಗಳನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರಕಾರ. ಕಾಂಗ್ರೆಸ್ ಬಡವರ ಅಭಿವೃದ್ಧಿಯ ಬಗ್ಗೆ ಬದ್ಧತೆ ಇದ್ದು, ಇಲಾಖೆಯ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಹೆಚ್ಚಳ, ಗಂಗಾಕಲ್ಯಾಣ ಯೋಜನೆಯ ಭೌತಿಕ ಗುರಿ ಹೆಚ್ಚಳ ಮತ್ತು ಭೂ ಒಡೆತನ ಯೋಜನೆಗೆ ಒತ್ತು ನೀಡಲಾಗುವುದು ಎಂದರು.
ಭೂಚೇತನ ಯೋಜನೆ ಅಡಿ ವಿಜಯಪುರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈಗಾಗಲೇ ತನಿಖೆಗೆ ಸೂಚಿಸಲಾಗಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.





