ಬರ | ಗ್ರಾಮೀಣ ಬಡವರಿಗೆ 175 ದಿನ ಉದ್ಯೋಗ ನೀಡಲು ಕೇಂದ್ರಕ್ಕೆ ಸಚಿವ ಈಶ್ವರ್ ಖಂಡ್ರೆ ಆಗ್ರಹ

ಬೆಂಗಳೂರು : ರಾಜ್ಯದಲ್ಲಿ 226 ತಾಲೂಕುಗಳು ಬರ ಪೀಡಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಅಕುಶಲ ಬಡ ಕಾರ್ಮಿಕರಿಗೆ ವಿಬಿಜಿ ರಾಮ್ ಜಿ ಅಡಿಯಲ್ಲಿ 175 ದಿನ ಉದ್ಯೋಗ ನೀಡಲು ಅನುವಾಗುವಂತೆ ಕೆಲಸದ ಮಿತಿಯನ್ನು 50 ದಿನ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಅವರು, ಜನ ಗುಳೆ ಹೋಗದಂತೆ ತಪ್ಪಿಸಲು ಭೂ ರಹಿತ ಕೂಲಿ ಕಾರ್ಮಿಕರಿಗೆ, ದುರ್ಬಲರಿಗೆ, ಗ್ರಾಮೀಣ ಬಡಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಅಗತ್ಯ ಇದೆ. ಜತೆಗೆ, ರಾಜ್ಯದಲ್ಲಿ ಈ ವರ್ಷ ತೀವ್ರ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಬಾಧಿತವಾಗಿದ್ದು, ಸ್ಥಳೀಯ ಬಡ ಹಾಗೂ ಅಕುಶಲ ಕಾರ್ಮಿಕರಿಗೆ ಉದ್ಯೋಗ ದೊರಕದಂತಾಗಿ ನಗರಗಳಿಗೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ವಿಬಿಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗ ಕಲ್ಪಿಸಿ ಗುಳೆ ಹೋಗುವುದನ್ನು ತಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬರದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಗ್ರಾಮೀಣ ಜನರು ವಿಬಿಜಿ ರಾಮ್ ಜಿ ಉದ್ಯೋಗಕ್ಕೆ ಬೇಡಿಕೆಯಿದ್ದು, ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಶೇ.30.33ರಷ್ಟು ಹೆಚ್ಚುವರಿ ಮಾನವ ದಿನ ಸೃಜಿಸಲಾಗಿದೆ. ಹೀಗಾಗಿ ಹಾಲಿ ಇರುವ 125 ದಿನಗಳ ಕೆಲಸದ ಮಿತಿಗೆ 50 ಹೆಚ್ಚುವರಿ ದಿನ ಸೇರಿಸಿ 175 ದಿನ ಉದ್ಯೋಗ ನೀಡಲು ಅವಕಾಶ ನೀಡಬೇಕು. ಇನ್ನೊಂದೆಡೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ) ಅಡಿಯಲ್ಲಿ ಕೇಂದ್ರ ಸರಕಾರ ಪ್ರತಿಶತ 90ರಷ್ಟು ವೆಚ್ಚ ಭರಿಸುತ್ತಿತ್ತು. ರಾಜ್ಯ ಸರಕಾರ ಕೇವಲ ಶೇ.10 ವೆಚ್ಚ ಭರಿಸುತ್ತಿತ್ತು. ಆದರೆ ವಿಬಿಜಿ ರಾಮ್ ಜಿ ಅಡಿ 60:40 ಅನುಪಾತ ಮಾಡಲಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಆದ್ದಾಗ್ಯೂ, ಗ್ರಾಮೀಣ ಬಡವರು, ದುರ್ಬಲರು, ವಂಚಿತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪಸಂಖ್ಯಾತ ಭೂರಹಿತ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರಕಾರ ಯೋಜನೆ ಜಾರಿಗೆ ತಂದಿದ್ದು, ಕಳೆದ ಜುಲೈನಿಂದ ಇಲ್ಲಿಯವರೆಗೆ 2.83 ಕೋಟಿ ಮಾನವ ದಿನ ಸೃಜಿಸಿದೆ ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.35ರಷ್ಟು ಹೆಚ್ಚಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.






