ಬೆಂಗಳೂರಿನಲ್ಲಿ 28.75 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ಗಳ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಕೇಂದ್ರೀಯ ಅಪರಾಧ ದಳ(ಸಿಸಿಬಿ) ಪೊಲೀಸರು ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ, ಬಂಧಿತರಿಂದ 28.75 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಂಜೇನಿಯಾದ ಮಹಿಳೆ ನಾನ್ಸಿ ಒಮೆರೈ ಲಾವ(29) ಹಾಗೂ ನೈಜೀರಿಯಾದ ಇಮಾನುಯಲ್ ಆರೇಂಜ್(28) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 28.75 ಕೋಟಿ ರೂ. ಮೌಲ್ಯದ 10 ಕೆ.ಜಿ ಎಂಡಿಎಂಎ ಕ್ರಿಸ್ಟೆಲ್, 8 ಕೆ.ಜಿ ಹೈಡ್ರೋಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಿದರು.
ಸಂಪಿಗೆಹಳ್ಳಿಯ ರಾಚೇನಹಳ್ಳಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ನಾನ್ಸಿ ಒಮೆರೈ ಲಾವ ಹೇರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಹಣದಾಸೆಗೆ ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದಳು. ಆರೋಪಿ ಮಹಿಳೆಯು ಮನೆಯಲ್ಲಿ 18.50 ಕೋಟಿ ರೂ. ಮೌಲ್ಯದ 9 ಕೆ.ಜಿ 254 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ದಾಸ್ತಾನು ಮಾಡಿಕೊಂಡು ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಲು ಸಂಚು ರೂಪಿಸಿದ್ದಳು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
ಸಿದ್ದಾಪುರದ ಲಾಲ್ಭಾಗ್ ಸೌತ್ಗೇಟ್ನ ಬಾಸ್ಕೆಟ್ ಬಾಲ್ ಕೋರ್ಟ್ ಬಳಿ ಪ್ರತಿ ದಿನ ಶಂಕಾಸ್ಪದ ಓಡಾಡಿಕೊಂಡು, ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾದ ಇಮಾನುಯಲ್ ಆರೇಂಜ್ನನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿ ನೈಜೀರಿಯಾದ ಇಮಾನುಯಲ್ ಆರೇಂಜ್ನನ್ನು ಬಂಧಿಸಲಾಗಿದೆ. ಬಂಧಿತನಿಂದ 2.25 ಕೋಟಿ ರೂ. ಮೌಲ್ಯದ 1 ಕೆ.ಜಿ 115 ಗ್ರಾಂ ಎಂಡಿಎಂಎ ಡ್ರಗ್ಸ್ ಸೇರಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಚಾಮರಾಜಪೇಟೆಯಲ್ಲಿರುವ ಫಾರಿನ್ ಫೋಸ್ಟ್ ಆಫೀಸ್ನ ಕೆಲವು ಪಾರ್ಸೆಲ್ಗಳಲ್ಲಿ ನಿಷೇದಿತ ಮಾದಕ ವಸ್ತುಗಳಿರುವ ಬಗ್ಗೆ ಕಸ್ಟಮ್ಸ್ ನ ಅಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ 8 ಕೋಟಿ ಮೌಲ್ಯದ 8 ಕೆ.ಜಿ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
50 ಸಾವಿರ ಬಹುಮಾನ: ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ನೇತೃತ್ವದಲ್ಲಿ ಡಿಸಿಪಿ ರಾಜಾ ಇಮಾಮ್ ಖಾಸೀಂ ನೇತೃತ್ವದ ಎಸಿಪಿ ಎಚ್.ಕೆ.ಮಹಾನಂದ್, ಇನ್ಸ್ ಪೆಕ್ಟರ್ ಗಳಾದ ವಿ.ಡಿ.ಶಿವರಾಜು, ಲಕ್ಷ್ಮಿನಾರಾಯಣ್.ಕೆ, ರಕ್ಷಿತ್.ಎಕೆ ಮತ್ತವರ ಸಿಬ್ಬಂದಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.







