ಬೆಂಗಳೂರಿನಲ್ಲಿ ಜು.1ರಿಂದ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಇ-ಖಾತಾ ಕಡ್ಡಾಯ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇಒಡಿಬಿ-ಒಬಿಪಿಎಸ್ ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ನೀಡಲಾಗುತ್ತಿದ್ದು, ಜು.1ರಿಂದ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಇ-ಖಾತಾವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸೋಮವಾರ ಆದೇಶ ಹೊರಡಿಸಿರುವ ಅವರು, ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿದೆ. ಆದುದರಿಂದ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ ಎಂದಿದ್ದಾರೆ.
ನಗರ ಯೋಜನಾ ವಿಭಾಗದಿಂದ ನಕ್ಷೆ ಮಂಜೂರಾತಿ ನೀಡುತ್ತಿರುವ ಇಒಡಿಬಿ-ಒಬಿಪಿಎಸ್ ಆನ್ ಲೈನ್ ತಂತ್ರಾಂಶವನ್ನು ಪ್ರಾಧಿಕಾರದ ಕಂದಾಯ ವಿಭಾಗದಿಂದ ಇ-ಖಾತಾ ನೀಡುತ್ತಿರುವ ಇ-ಆಸ್ತಿ ತಂತ್ರಾಂಶದೊಂದಿಗೆ ಏಕೀಕರಣಗೊಳಿಸಲು ಕ್ರಮ ವಹಿಸಲಾಗಿದೆ. ನಿವೇಶನ /ಸ್ವತ್ತಿನ ಕಂದಾಯ ದಾಖಲಾತಿಗಳ ಪರಿಶೀಲನೆಯನ್ನು ಕೈಗೊಳ್ಳಲು ಸ್ವತ್ತಿನ ಇ-ಖಾತಾ/ಇಪಿಐಡಿ ಸಂಖ್ಯೆಯನ್ನು ಆನ್‍ಲೈನ್ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜು.1ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಆನ್‍ಲೈನ್‍ನಲ್ಲಿ ನಕ್ಷೆ ಒಳಗೊಂಡಂತೆ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗಾಗಿ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಲಾಗಿದೆ.