ದಾಖಲೆಯಿಲ್ಲದ ‘ಗ್ರಾಮಠಾಣಾ ಆಸ್ತಿ’ಗೆ ಇ-ಸ್ವತ್ತು; ನ.2ರಿಂದ ಅರ್ಜಿ ಸ್ವೀಕಾರ : ಸಚಿವ ಈಶ್ವರ್ ಖಂಡ್ರೆ
‘25ರಿಂದ 30ಲಕ್ಷ ಗ್ರಾಮೀಣ ಆಸ್ತಿ ಮಾಲಕರಿಗೆ ಇ-ಸ್ವತ್ತು ಶೀಘ್ರ’

ಈಶ್ವರ್ ಖಂಡ್ರೆ
ಬೆಂಗಳೂರು : ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆಗಳು ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಸರಕಾರ ನಿರ್ಧರಿಸಿದ್ದು, ನ.2ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಆಸ್ತಿ ಮಾಲಕರ ಬಹುದಿನಗಳ ಸಮಸ್ಯೆ ಪರಿಹರಿಸಲು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಲಾಗಿದ್ದು, ಇ-ಸ್ವತ್ತು 2 ತಂತ್ರಾಂಶದಲ್ಲೂ ಕೆಲವು ಮಾರ್ಪಾಡು ಮಾಡಲಾಗಿದೆ ಎಂದರು.
ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿರುವ ಅಂದಾಜು 25ರಿಂದ 30 ಲಕ್ಷ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, 2025ರ ಎಪ್ರಿಲ್ 7ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ-ಸ್ವತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ರೀತಿ ದಾಖಲೆ ಇಲ್ಲದವರಿಗೆ ಇ-ಸ್ವತ್ತು ನೀಡುವಾಗ ನ್ಯಾಯಾಲಯದಲ್ಲಿ ವ್ಯಾಜ್ಯ, ಭಾಗಕ್ಕಾಗಿ ತಗಾದೆ ಇದ್ದರೆ ಅಥವಾ ಅರ್ಜಿ ಸಲ್ಲಿಸಿದವರು ಮೂಲ ಮಾಲಕರಲ್ಲದಿದ್ದಲ್ಲಿ ಅಥವಾ ಇನ್ನಾವುದೇ ಸಿಂಧುವಾದ ಕಾರಣವಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ತೊಡಕು ಎದುರಾಗದಂತೆ, ಸ್ವತ್ತಿನ ಮಾಲಕರಿಂದ ಪ್ರಮಾಣಪತ್ರ ಪಡೆದು, ಅವರು ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಇ-ಸ್ವತ್ತು ಪ್ರಮಾಣ ಪತ್ರ ರದ್ದು ಮಾಡಬಹುದು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಸತಿ ಯೋಜನೆಗೆ ಸಂಬಂಧಿಸಿದಂತೆ ಸರಕಾರದಿಂದ ಯಾವುದೇ ಹಕ್ಕುಪತ್ರ ಪಡೆದಿದ್ದು, ಪ್ರಸ್ತುತ ಸದರಿ ಹಕ್ಕುಪತ್ರ ಲಭ್ಯವಿಲ್ಲದಿದ್ದರೂ ಹಕ್ಕುಪತ್ರ ವಿತರಣಾ ಪ್ರಾಧಿಕಾರದ ಧೃಢೀಕರಣ ಪತ್ರ ಪಡೆದು ಇ-ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಲೆನಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಕಣ, ಮನೆ ಸಹಿತ ಇನ್ನಿತರ ಆಸ್ತಿಗಳಿಗೂ ಇ-ಸ್ವತ್ತು ನೀಡಲಾಗುವುದು ಎಂದರು.
‘ಬಿ ಖಾತೆ’ ವಿಧಾನದ ಸರಳೀಕರಣ :
ನಮೂನೆ-11 ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಜನರು ಯಾವುದೇ ನೋಂದಾಯಿತ ಪತ್ರ ಇಲ್ಲದೆ ತಮ್ಮ ಕೃಷಿ ಜಮೀನಿನಲ್ಲಿ ವಾಸ/ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11 ಬಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ನುಡಿದರು.
ಕೃಷಿ ಭೂಮಿಯಲ್ಲಿ ವಸತಿ ಯೋಜನೆಯಡಿಯಲ್ಲಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕವಾಗಿ ಅರಣ್ಯವಾಸಿಗಳು, ಅರಣ್ಯ ಭಾಗದಲ್ಲಿ ವಾಸವಾಗಿರುವವರು ಅರಣ್ಯ ಹಕ್ಕು ಕಾಯಿದೆಯಂತೆ ಹಕ್ಕು ಪತ್ರ ಪಡೆದಿದ್ದಲ್ಲಿ ಅಂತಹ ಆಸ್ತಿಗಳಿಗೆ ನಮೂನೆ ಪಡೆಯಲು ಈ ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದರು.
ಹಿತ್ತಲು, ಮನೆಯಂಗಳ ಸೇರಿ ಒಟ್ಟು 4 ಸಾವಿರ ಚದರಡಿಯೊಳಗಿರುವ ನಿವೇಶನ, ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಪ್ರತಿಶತ 90ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ 11ಎ/11ಬಿ ನೀಡಲು ಅವಕಾಶ ಆಗಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನದಡಿ ಗಾಂಧೀ ಜಯಂತಿ ದಿನವಾದ ಅ.2ರಿಂದ ಅರ್ಜಿಗಳನ್ನು ಸ್ವೀಕರಿಸಿ, ನ.1ರ ರಾಜ್ಯೋತ್ಸವ ದಿನದಿಂದ ಇ-ಸ್ವತ್ತು ಪ್ರಮಾಣ ಪತ್ರ ನೀಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ಪರಿಷತ್ತಿನ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅ.2ರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಹೀಗಾಗಿ ಇದೀಗ ರಾಜ್ಯೋತ್ಸವದ ಕೊಡುಗೆಯಾಗಿ ನ.2ನೆ ವಾರದಿಂದ ಗ್ರಾಮಠಾಣ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನವನ್ನು ಆರಂಭಿಸಲಾಗುತ್ತಿದ್ದು ಅರ್ಜಿ ಸ್ವೀಕರಿಸಿ, ಪರಿಶೀಲಿಸಿ, ಡಿಸೆಂಬರ್ ಮೊದಲ ವಾರದಿಂದ ಇ-ಸ್ವತ್ತು ವಿತರಿಸಲಾಗುವುದು ಎಂದರು.






