ಆರ್ಥಿಕ ತಾರತಮ್ಯವನ್ನು ಮೀಸಲಾತಿ ಮೂಲಕ ಬದಲಾಯಿಸಲು ಸಾಧ್ಯವಿದೆ : ದಿನೇಶ್ ಅಮೀನ್‍ಮಟ್ಟು

ಬೆಂಗಳೂರು : ಮೀಸಲಾತಿಯ ಉದ್ದೇಶ ಜಾತಿಯನ್ನು ಸ್ಥಾಪನೆ ಮಾಡುವುದು ಅಲ್ಲ, ಬದಲಿಗೆ ಜಾತಿಯನ್ನು ನಾಶ ಮಾಡುವುದೇ ಆಗಿದೆ. ಸಾಮಾಜಿಕ ತಾರತಮ್ಯ ನಿವಾರಣೆಯನ್ನು ಮನಸ್ಥಿತಿ ಬದಲಾವಣೆಯ ಮೂಲಕ ಮಾಡಬೇಕು. ಆರ್ಥಿಕ ತಾರತಮ್ಯವನ್ನು ಮೀಸಲಾತಿ ಮೂಲಕ ಬದಲಾಯಿಸಲು ಸಾಧ್ಯವಿದೆ ಎಂದು ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ತಿಳಿಸಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ’ ಸಮಾರಂಭದ ‘ಕರ್ನಾಟಕದಲ್ಲಿನ ಅಭಿವೃದ್ಧಿ ಮಾದರಿಗಳು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಮರ್ಯಾದೆ ಹತ್ಯೆಗಳು ಹೆಚ್ಚಾಗುತ್ತವೆ. ನಗರದಲ್ಲಿ ನಡೆಯುವುದಿಲ್ಲ. ನಗರದಲ್ಲಿರುವ ದಲಿತ ಕುಟುಂಬದ ಐಎಎಸ್, ಕೆಎಎಸ್ ಅಧಿಕಾರಿ ಬ್ರಾಹ್ಮಣ ಸೇರಿ ಮೇಲ್ವರ್ಗದ ಹುಡುಗಿಯನ್ನು ವಿವಾಹವಾದರೆ, ಅಲ್ಲಿ ವಿರೋಧ ಬರುವುದಿಲ್ಲ. ಹಳ್ಳಿಯಲ್ಲಿ ದಲಿತ ಹುಡುಗ, ಮೇಲ್ಜಾತಿಯ ಹುಡುಗಿಯನ್ನು ವಿವಾಹವಾದರೆ, ದಂಪತಿಗಳನ್ನು ಕೊಲ್ಲುತ್ತಾರೆ. ಏಕೆಂದರೆ ಅವರು ಬಡವರಾಗಿತ್ತಾರೆ ಎಂದು ಅವರು ತಿಳಿಸಿದರು.
‘ಎಲ್ಲಿಯವರೆಗೂ ಹೊಲೆಯ, ಮಾದಿಗರು ಮಹಾತ್ಮ ಗಾಂಧಿ(ಎಂಜಿ) ರಸ್ತೆಯಲ್ಲಿ ಹೋಟೆಲ್ ಹಾಕಿ, ಆ ಹೋಟೆಲ್‍ನಲ್ಲಿ ಕಿಕ್ಕಿರುದುಜನ ತುಂಬುತ್ತಾರೋ, ಆ ದಿನದ ಮರು ದಿನವೇ ಮೀಸಲಾತಿಯನ್ನು ತೆಗೆದು ಬಿಡಿ. ಅಲ್ಲಿಯ ವರೆಗೂ ಮೀಸಲಾತಿ ನೀಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಪ್ರತಿಪಾದಿಸಿದರು.
ನಾಳೆ ಹೊಲೆಯರೋ, ಮಾದಿಗರೋ ಮಾಂಸದ ಅಂಗಡಿಯನ್ನು ಹಾಕಿದರೆ, ಹೊಲೆಯ, ಮಾದಿಗರೇ ಅಂಗಡಿಗೆ ಹೋಗುವುದಿಲ್ಲ. ಆದರೆ ಬ್ರಾಹ್ಮಣ ಹೋಟೆಲ್ ಎಂದು ನಾಮಫಲಕ ಹಾಕಿದರೆ ಜನ ಕಿಕ್ಕಿರಿದು ತುಂಬುತ್ತಾರೆ. ಅವರಿಗೆ ಒಂದು ಸೋಶಿಯಲ್ ಕ್ಯಾಪಿಟಲ್ ಇದೆ. ಇದನ್ನು ನಮ್ಮ ಯುವ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮೀಸಲಾತಿ ಎಂಬುದು ಉದ್ಯೋಗವು ಶೇ.2ರಷ್ಟು ಮಾತ್ರ ಇರುವ ಸರಕಾರಿ ಉದ್ಯೋಗಗಳಲ್ಲಿ ಮಾತ್ರ ಇದೆ. ಶೇ.98ರಷ್ಟು ಉದ್ಯೋಗ ಖಾಸಗಿ ಕ್ಷೇತ್ರದಲ್ಲಿದ್ದು, ಅಲ್ಲಿ ಮೀಸಲಾತಿಇಲ್ಲ. ಇದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.







