ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಆರ್ಥಿಕ ನಷ್ಟ: ಡಿ.ಕೆ.ಸುರೇಶ್

ಡಿ.ಕೆ.ಸುರೇಶ್
ಬೆಂಗಳೂರು, ಎ.7: “ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟನ್ನು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆಗಳು ಉತ್ತರದ ರಾಜ್ಯಗಳಿಗೆ ಹಂಚಿಕೆಯಾಗಲಿದೆ”ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿಂದು ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಲೋಕಸಭಾ, ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಿಂದ ಕ್ಷೇತ್ರಗಳು ನಷ್ಟವಾಗುವುದಿಲ್ಲ ಎನ್ನುವ ಪ್ರಧಾನಿಯವರ ಹೇಳಿಕೆಯ ಬಗ್ಗೆ ಕೇಳಿದಾಗ, “ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ದಕ್ಷಿಣದ ರಾಜ್ಯಗಳು ಎಚ್ಚೆತ್ತುಕೊಳ್ಳಬೇಕು. ಒಂದಲ್ಲ ಒಂದು ದಿನ ಈ ಕೂಗು ಎದ್ದೇಳಲಿದೆ ಎಂದಿದ್ದೇ. ಇಲ್ಲದಿದ್ದರೇ ಜನರು ಪರ್ಯಾಯ ಮಾರ್ಗಗಳನ್ನು ಆಲೋಚನೆ ಮಾಡುತ್ತಾರೆ ಎಂದು ಹೇಳಿದ್ದೆ. ಎಷ್ಟು ಸೀಟು ಹೋಗಲಿದೆ, ಬರಲಿದೆ ಎನ್ನುವುದು ಮುಖ್ಯವಲ್ಲ” ಎಂದರು.
“ಎ.16ರಂದು ಲೋಕಸಭಾ ವಿಶೇಷ ಅಧಿವೇಶನ ಕರೆಯಲಾಗಿದೆ. ಸರಕಾರ ಯಾವ ರೀತಿಯಲ್ಲಿ ಬಿಲ್ ಮಂಡಿಸಲಿದೆ ಎಂದು ನೋಡಬೇಕಿದೆ. ಒಟ್ಟಾರೆ ದಕ್ಷಿಣ ಭಾರತದ ಹಣವನ್ನು ಉತ್ತರದ ರಾಜ್ಯಗಳಿಗೆ ತಗೆದುಕೊಂಡು ಹೋಗುವಂತಹ ಹುನ್ನಾರ ಇದಾಗಿದೆ” ಎಂದು ಸುರೇಶ್ ಹೇಳಿದರು.
“2011 ರ ಜನಗಣತಿಯ ಅನ್ವಯ ನಾವು ವಿಂಗಡಣೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದು ಇನ್ನೂ ಮಾರಕ. 2011ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 60-70 ಲಕ್ಷ. ಈಗ 1.40 ಕೋಟಿ ಜನಸಂಖ್ಯೆಯಿದೆ. ಕರ್ನಾಟಕದ ಜನಸಂಖ್ಯೆ 5 ಕೋಟಿಯಿತ್ತು. ಈಗ ಏಳು ಕೋಟಿಗೂ ಮೀರಿ ಜನಸಂಖ್ಯೆ ಬೆಳೆಯುತ್ತಿದೆ. ಇದರ ಜೊತೆಗೆ ಆರ್ಥಿಕ ಸವಾಲು ಸೇರಿದಂತೆ ಅನೇಕ ಸವಾಲುಗಳು ಎದುರಾಗುತ್ತವೆ. ಎಲ್ಲಾ ಪಕ್ಷಗಳು ಇದರ ಬಗ್ಗೆ ಚಿಂತನೆ ಮಾಡಬೇಕು” ಎಂದು ಅವರು ಹೇಳಿದರು.
*ಯುದ್ಧದಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆ; ಪ್ರಧಾನಿ ಮೌನ ಮುರಿದಿಲ್ಲ
“ಯುದ್ಧದಿಂದ ಸಾಕಷ್ಟು ಸಮಸ್ಯೆಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ತನ್ನ ಮೌನವನ್ನು ಮುರಿದಿಲ್ಲ. ಭಾರತದ ನಾಗರಿಕರಿಗೆ ಪ್ರಧಾನಿ ಬೇರೆ ಸಂದರ್ಭದಲ್ಲಿ ಸಂದೇಶ ನೀಡುತ್ತಾರೆ. ಆದರೆ ಇವತ್ತಿನ ತನಕ ಪ್ರಧಾನಿ ಸೇರಿದಂತೆ ಯಾವ ಕೇಂದ್ರ ಸಚಿವರು ಸಹ ದೇಶದ ಜನರು ಪರಿಸ್ಥಿತಿ ಹೇಗೆ ಎದುರಿಸಬೇಕು ಎಂದು ಸಂದೇಶ ನೀಡಿಲ್ಲ. ಭಾರತದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೇರ ಹೊಣೆಗಾರಿಕೆ ಪ್ರಧಾನಿಯವರೇ ಹೊರಬೇಕು. ಯಾವ ವಿಚಾರದಲ್ಲಿ ಸಮಸ್ಯೆಯಿದೆ. ಮುಂದಿನ ಆರು ತಿಂಗಳು ಹೇಗೆ ಇವುಗಳನ್ನು ಎದುರಿಸಬೇಕು. ಇದಕ್ಕೆ ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂದೇಶ ನೀಡಬೇಕು” ಎಂದು ಡಿ.ಕೆ.ಸುರೇಶ್ ಆಗ್ರಹಿಸಿದರು.
“ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಮೂರನೇ ವ್ಯಕ್ತಿ ಹೇಳುವಂತಹದ್ದು, ಮಾಧ್ಯಮಗಳಲ್ಲಿ ಇದನ್ನು ಬಿತ್ತರಿಸುತ್ತಿರುವುದು ನೋಡಿದರೆ ಯಾವುದೂ ಸಹ ಸರಿಯಿಲ್ಲ ಎನ್ನುವ ಅನುಮಾನ ಉಂಟಾಗಲಿದೆ. ಬೆಲೆ ಏರಿಕೆಯಾಗಿದೆ, ಅಭಾವಗಳು ಉಂಟಾಗಿದೆ. ಈ ರೀತಿ ಆದಾಗ ಇದು ಕೃತಕವಾಗಿ ಸೃಷ್ಟಿಯಾಗಿರುವುದೇ ಅಥವಾ ಬೇರೆಯೇ ಎನ್ನುವ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು ಎಂದರು.
*ಪರಮೇಶ್ವರ್ ಅವರನ್ನೇ ಕೇಳಬೇಕು
ಮುಂದಿನ ಎರಡು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಪರಮೇಶ್ವರ್ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಅವರನ್ನೇ ಕೇಳಬೇಕು. ಗೃಹಸಚಿವರು ಅಧಿಕೃತವಾಗಿ ಹೇಳಿದ್ದಾರೆ. ಅವರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು”ಎಂದರು.
ಅಣ್ಣನನ್ನು ಒಮ್ಮೆ ಸಿಎಂ ಮಾಡಬೇಕು ಎನ್ನುವ ನಿಮ್ಮ ಆಸೆಯ ಬಗ್ಗೆ ಕೇಳಿದಾಗ, “ಅದರ ಬಗ್ಗೆ ಆನಂತರ ಮಾತನಾಡೋಣ. ನಾನೇನೂ ಆಸೆಯಿಲ್ಲ ಎಂದು ಹೇಳಿಲ್ಲವಲ್ಲ. ಇಂದೇ ಸಿಎಂ ಆಗುತ್ತಾರೆ ಎಂದು ಹೇಳಿರುವೆನೆ?. ಆಸೆಯಿದೆ ಎಂದು ಹೇಳಿರುವೆ” ಎಂದರು.
ಈ ಅವಧಿಯಲ್ಲಿ ನಿಮ್ಮ ಅಣ್ಣ ಸಿಎಂ ಆಗುವುದಿಲ್ಲವೇ ಎಂದು ಕೇಳಿದಾಗ, “ಆನಂತರ ಮಾತನಾಡೋಣ” ಎಂದರು.
*ಉಪ ಚುನಾವಣೆ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಉಪಚುನಾವಣೆ ಬಗ್ಗೆ ಕೇಳಿದಾಗ, “ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಭಾಗದ ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರಕಾರ ಸಾಕಷ್ಟು ಸ್ಪಂದಿಸಿದೆ. ಹೀಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ” ಎಂದು ಸುರೇಶ್ ಹೇಳಿದರು.
ಬಾಗಲಕೋಟೆಯಲ್ಲಿ ಸೋಲಾಗಲಿದೆ ಎನ್ನುವ ಬಗ್ಗೆ ಕೇಳಿದಾಗ, “ಅದೆಲ್ಲಾ ಊಹಾಪೋಹ. ನಾವು ಅತ್ಯಧಿಕ ಮತಗಳಿಂದ ಗೆಲ್ಲಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಕೇಳಿದಾಗ, “ಉಪಚುನಾವಣೆ ಆದ ನಂತರ ಮಾತನಾಡೋಣ. ಸದ್ಯಕ್ಕೆ ನಮ್ಮನ್ನು ತಮಿಳುನಾಡು ಚುನಾವಣೆ ಜವಾಬ್ದಾರಿ ನೀಡಿದ್ದಾರೆ. ಅಲ್ಲಿಗೆ ಹೋಗಿ ಆ ಜವಾಬ್ದಾರಿ ನಿಭಾಯಿಸಲಿದ್ದೇವೆ”ಎಂದರು.






