ದಕ್ಷಿಣ ಭಾರತ ಮಟ್ಟದ ಬೃಹತ್ ಸಮಾವೇಶಕ್ಕೆ ಈಡಿಗರು ಸಜ್ಜು
ಸಮುದಾಯದ 28 ಉಪ ಪಂಗಡಗಳ ಮುಖಂಡರ ಸಭೆಯಲ್ಲಿ ನಿರ್ಣಯ

ಬೆಂಗಳೂರು : ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ ಈಡಿಗ ಸಮುದಾಯದ 28 ಉಪ ಪಂಗಡಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸಿ ದಕ್ಷಿಣ ಭಾರತ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲು ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮುದಾಯದ ಮುಖಂಡರಿಂದ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಭೆಯಲ್ಲಿ ದಕ್ಷಿಣ ಭಾರತದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿತರಾಗುವ ಉದ್ದೇಶದಿಂದ ಈಡಿಗ, ಈಳವ, ನಾಡಾರ್, ಬಿಲ್ಲವ, ಭಂಡಾರಿ, ನಾಮಧಾರಿ, ಧೀವರು ಸೇರಿದಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಈಡಿಗ ಸಮುದಾಯದ 28 ಉಪ ಪಂಗಡಗಳು ಹಾಗೂ ಅವರ ಅನುಯಾಯಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸಲು ಸದ್ಯದಲ್ಲೇ ಬೃಹತ್ತಾದ ಸಮಾವೇಶ ನಡೆಸಬೇಕು ಎಂದು ಒಕ್ಕೊರಲಿನಿಂದ ನಿರ್ಧರಿಸಲಾಯಿತು.
ತೆಲಂಗಾಣದ ಮಾಜಿ ಸಚಿವ ಶ್ರೀನಿವಾಸಗೌಡ್, ತಮಿಳುನಾಡಿನಿಂದ ರಾಜಾ ನಾಡಾರ್, ಗೋವಾದಿಂದ ನಾಯ್ಕ್ ಅವರ ನೇತೃತ್ವದಲ್ಲಿ ಬೆಂಗಳೂರು, ಹೈದರಾಬಾದ್, ನಾಗಪುರ ಹಾಗೂ ಗೋವಾದಲ್ಲಿ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿ ದಕ್ಷಿಣ ಭಾರತ ಮಟ್ಟದ ಸಮಾವೇಶದ ಸ್ಥಳ ನಿಗದಿಪಡಿಸಿ ಕನಿಷ್ಠ ಐದು ಲಕ್ಷ ಜನರು ಪಾಲ್ಗೊಳ್ಳುವಂತೆ ಸಮಾವೇಶವನ್ನು ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಮುದಾಯಗಳ ಹಕ್ಕೊತ್ತಾಯವನ್ನು ರಾಜ್ಯ ಸರಕಾರದ ಗಮನಕ್ಕೆ ತರಲು ತೀರ್ಮಾನಿಸಿ ಮುಖ್ಯಮಂತ್ರಿಗಳಿಗೆ ರಾಜ್ಯ ಮುಖಂಡರ ನಿಯೋಗವು ಭೇಟಿ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.
ಸಭೆಯಲ್ಲಿ ಈಡಿಗ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ. ಅನುದಾನ, ಸೋಲೂರು ಈಡಿಗ ಮಹಾಸಂಸ್ಥಾನದಲ್ಲಿ ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ, ಮಂಗಳೂರು ವಿ.ವಿ.ಯಲ್ಲಿರುವ ನಾರಾಯಣಗುರು ಅಧ್ಯಯನ ಪೀಠಕ್ಕೆ 5 ಕೋಟಿ ರೂ. ಅನುದಾನ, ಕೋಟಿ- ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ, ಈಡಿಗ ಸಮುದಾಯದ ಉಪ ಪಂಗಡಗಳ ಜನರ ಪುನರ್ ವಸತಿಗಾಗಿ ಪ್ಯಾಕೇಜ್ ಘೋಷಣೆ ಸೇರಿದಂತೆ ಸಮುದಾಯಗಳ ಹಲವು ಹಕ್ಕೊತ್ತಾಯಗಳನ್ನು ಈಡೇರಿಸಲು ರಾಜ್ಯ ಸರಕಾರವನ್ನು ಒತ್ತಾಯಿಸಲಾಯಿತು.







