ಜನಸಾಮಾನ್ಯರ ಮಕ್ಕಳೂ ನಾಯಕತ್ವದ ಗುಣ ಬೆಳೆಸಿಕೊಂಡು ಉನ್ನತ ಸ್ಥಾನಕ್ಕೇರಬೇಕು : ಸಿಎಂ ಡಿ.ಕೆ.ಶಿವಕುಮಾರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೂತನವಾಗಿ ಆಯ್ಕೆಯಾದ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ಪ್ರದಾನ ಸಮಾರಂಭ

Photo credit : @DKShivakumar
ಬೆಂಗಳೂರು : ನಾಯಕತ್ವದ ಗುಣ ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಪ್ರತಿಯೊಂದು ಮಗುವು ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಶಾಸಕರು, ಸಚಿವರ ಮಕ್ಕಳೇ ನಾಯಕರಾಗಿ ಬೆಳೆಯಬೇಕೆಂದೇನಿಲ್ಲ. ಜನಸಾಮಾನ್ಯರ ಮಕ್ಕಳೂ ನಾಯಕತ್ವದ ಗುಣ ಬೆಳೆಸಿಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೂತನವಾಗಿ ಆಯ್ಕೆಯಾಗಿರುವ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ಪ್ರದಾನ ಮಾಡುವ ‘ಶೈಕ್ಷಣಿಕ ಸಾರಥ್ಯ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಸಮೂಹ ಹಾಗೂ ಸಮಾಜ ವಿಶ್ವಾಸವಿಟ್ಟಿದೆ. ಪ್ರತಿಭೆಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಾಗ ಸಚಿವನಾಗಿದ್ದಾಗ ಅಥವಾ ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಸಂತೋಷಕ್ಕಿಂತಲೂ ಹೆಚ್ಚಿನ ಸಂತೋಷವಾಗಿತ್ತು. ವಿದ್ಯೆಯು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಒಂದು ಪುಸ್ತಕ, ಒಂದು ಲೇಖನಿ, ಒಬ್ಬ ಶಿಕ್ಷಕ ದೇಶದ ಭವಿಷ್ಯ ಬದಲಿಸಬಲ್ಲರು :
ಒಂದು ಪುಸ್ತಕ, ಒಂದು ಲೇಖನಿ ಹಾಗೂ ಒಬ್ಬ ಶಿಕ್ಷಕ ಇಡೀ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲರು. ದೇಶದ ಭವಿಷ್ಯ ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಿಮ್ಮ ಮೇಲೆ ನಮಗೆ ನಂಬಿಕೆಯಿದೆ. ಕೇವಲ ಸ್ವಂತಕ್ಕಾಗಿ ಶಿಕ್ಷಣ ನೀಡಬಾರದು; ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ನೀಡಬೇಕು ಎಂದರು.
ಸೈನಿಕ, ಕೃಷಿಕ, ಕಾರ್ಮಿಕ ಹಾಗೂ ಶಿಕ್ಷಕರು ಸಮಾಜದ ನಾಲ್ಕು ಸ್ತಂಭಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ನಾಲ್ಕು ಸ್ತಂಭಗಳಾಗಿವೆ. ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದು, ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 222 ಜನರಿಗೆ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿ ಶುಭ ಹಾರೈಸುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿಯ ಬಗ್ಗೆ ಸರ್ಕಾರ ತನ್ನದೇ ಆದ ದೂರದೃಷ್ಟಿ ಹೊಂದಿದೆ. ಕಾಲೇಜುಗಳಲ್ಲಿ ಆಡಳಿತದ ಮೇಲೆ ಹಿಡಿತವಿಟ್ಟುಕೊಂಡು, ಚಂಚಲ ಮನಸ್ಸಿನ ವಿದ್ಯಾರ್ಥಿಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರಾಂಶುಪಾಲರ ಮೇಲಿದೆ. ಸಂಸ್ಥೆ ನಡೆಸುವ ಜವಾಬ್ದಾರಿ ನಿಮ್ಮದು. ಕಾಲೇಜಿನ ಆಡಳಿತವನ್ನು ಉತ್ತಮವಾಗಿ ನಿರ್ವಹಿಸುವುದರ ಜತೆಗೆ ಸ್ಪರ್ಧಾತ್ಮಕವಾಗಿ ಕಾಲೇಜುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಬದುಕು ಬೆಳಗಿಸುವ ಜ್ಯೋತಿ :
ಶಿಕ್ಷಣ ಬದುಕನ್ನು ಬೆಳಗಿಸುವ ಜ್ಯೋತಿ ಹಾಗೂ ಸಮಾಜವನ್ನು ಬದಲಾಯಿಸುವ ಶಕ್ತಿಯಾಗಿದೆ. ಪ್ರಾಂಶುಪಾಲರೇ ಶಿಕ್ಷಣ ಸಂಸ್ಥೆಗಳ ಸಾರಥಿಗಳು. ಸರ್ಕಾರ ಮತ್ತು ಪೋಷಕರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈಗ 5ಜಿ, 6ಜಿ ಯುಗ. ಮಕ್ಕಳೇ ಶಿಕ್ಷಕರಿಗೆ ಪಾಠ ಹೇಳುವಷ್ಟು ಚುರುಕಾಗಿದ್ದಾರೆ. ಇದರೊಂದಿಗೆ ಕೃತಕ ಬುದ್ಧಿಮತ್ತೆ (ಎಐ) ಕೂಡ ಬಂದಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ :
ಸರ್ಕಾರಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸ್ಪರ್ಧೆಯಿದೆ. ಹೆಣ್ಣುಮಕ್ಕಳು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ. ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರ ಹೊಣೆಗಾರಿಕೆ ಹೆಚ್ಚಿದೆ. ಕಾಲೇಜುಗಳಲ್ಲಿ ರ್ಯಾಗಿಂಗ್ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜುಗಳಲ್ಲಿ ಧರ್ಮ, ಜಾತಿ ತಾರತಮ್ಯಕ್ಕೆ ಅವಕಾಶ ಬೇಡ :
ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷ ಹಾಗೂ ಭೇದಭಾವ ಬೆಳೆಯಲು ಅವಕಾಶ ನೀಡಬಾರದು. ಈ ಕಾರಣಕ್ಕಾಗಿಯೇ ಕಾಲೇಜು ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಅರಿವು ಮೂಡಲಿದೆ. ನಾವೂ ಕಾಲೇಜು ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕವೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದೇವೆ ಎಂದರು.
ಈ ಸಮಾಜಕ್ಕೆ ವಿದ್ಯಾವಂತರ ಜತೆಗೆ ಪ್ರಜ್ಞಾವಂತರನ್ನೂ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಾಲೇಜುಗಳು ಉತ್ತಮ ಕೊಡುಗೆ ನೀಡಿವೆ. ಕುದುರೆಯನ್ನು ರೇಸ್ನಲ್ಲಿ ಓಡುವ ಕುದುರೆಯನ್ನಾಗಿ ಮಾಡುವುದು ಮುಖ್ಯವಲ್ಲ; ಕತ್ತೆಯನ್ನು ಕುದುರೆಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಹೇಳಿದರು.
ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗುವ ಆಶಯ :
ಸಿಎಸ್ಆರ್ ನಿಧಿ ಬಳಸಿ ಸಚಿವ ಬಾಲಕೃಷ್ಣ ಅವರ ಕ್ಷೇತ್ರದಲ್ಲಿ ಒಂದೊಂದು ಶಾಲೆಯನ್ನು 13ರಿಂದ 14 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 400ರಿಂದ 500ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳನ್ನು ದತ್ತು ಪಡೆಯಲಾಗಿದೆ. ರಾಜ್ಯದ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಶಾಲೆಗಳನ್ನು ದತ್ತು ಪಡೆಯಲಾಗುವುದು. ಹಳ್ಳಿಗಳಲ್ಲಿಯೇ ಉತ್ತಮ ಅವಕಾಶಗಳು ದೊರೆಯಬೇಕು ಎಂಬ ಉದ್ದೇಶದಿಂದ ನನ್ನ ಅವಧಿಯಲ್ಲಿ ಪ್ರಯತ್ನಿಸುತ್ತಿದ್ದೇನೆ. ನನ್ನ ಅವಧಿಯಲ್ಲಿ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕು ಎಂಬ ಆಶಯವೂ ಇದೆ ಎಂದು ತಿಳಿಸಿದರು.
ವಿಶ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಶಾಖೆಗಳನ್ನು ತೆರೆಯುತ್ತಿವೆ. ಹೀಗಾಗಿ ದೊಡ್ಡ ಮಟ್ಟದ ಸ್ಪರ್ಧೆಯೂ ಇದೆ. ಸರ್ಕಾರಿ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಕೆಲಸವಾದರೂ, ಲಭ್ಯವಿರುವ ಸೌಲಭ್ಯಗಳಲ್ಲಿಯೇ ಉತ್ತಮ ವ್ಯವಸ್ಥೆ ಕಲ್ಪಿಸಬೇಕು. ವಿಶ್ವಬ್ಯಾಂಕ್ ನೆರವು ಪಡೆದು ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಸಚಿವ ಬಸವರಾಜ ರಾಯರೆಡ್ಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದು, ಬದ್ಧತೆಯುಳ್ಳ ವ್ಯಕ್ತಿ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ ಎಂದರು.
ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು :
ವಿಶ್ವದ ಎಲ್ಲರೂ ಬೆಂಗಳೂರಿನತ್ತ ನೋಡುತ್ತಿದ್ದಾರೆ. ಭಾರತವು ಬೆಂಗಳೂರಿನ ಮೂಲಕವೇ ಬೆಳೆಯುತ್ತಿದೆ. ಶಿಕ್ಷಕರು ರಾಷ್ಟ್ರದ ನಿರ್ಮಾತೃಗಳು. ನಮ್ಮ ಮೇಲೆ ನೀವು ವಿಶ್ವಾಸವಿಡಬೇಕು. ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿಯೂ ನಿಮ್ಮ ಪಾತ್ರವಿದೆ. ಶಿಸ್ತಿನಿಂದ ಕಾರ್ಯನಿರ್ವಹಿಸಿದರೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನಿಮ್ಮ ಸೇವೆಯನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ನಿಮ್ಮ ಆಸಕ್ತಿ ಮೆಚ್ಚುವಂತಹದ್ದು. ನಾವೆಲ್ಲರೂ ಒಟ್ಟಾಗಿ ಸೇರಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಕೆಲಸ ಮಾಡೋಣ ಎಂದು ಹೇಳಿದರು.






