ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ ಮುಚ್ಚುವ ಆದೇಶಕ್ಕೆ ʼಫಾಫ್ರೆʼ ಖಂಡನೆ

ಬೆಂಗಳೂರು : ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಹೆಸರಿನಲ್ಲಿ ಸ್ಥಾಪಿಸಿದ್ದ, ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್ ಅನ್ನು ಮುಚ್ಚಲು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದ್ದು, ಅತ್ಯಂತ ಹೇಯ ಕೃತ್ಯ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ ) ಖಂಡಿಸಿದೆ.
ಗುರುವಾರ ಈ ಕುರಿತು ಪ್ರಕಟನೆ ನೀಡಿದ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಸಂಚಾಲಕ ಪ್ರೊ.ನಿರಂಜನಾರಾಧ್ಯ ವಿ.ಪಿ., ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತದ ಐಐಟಿಗಳು ಮತ್ತು ಎಐಐಎಂಎಸ್‍ನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸ್ಥಾಪಿಸಿರುವುದು ಅವಿಸ್ಮರಣೀಯ ಎಂದು ತಿಳಿಸಿದ್ದಾರೆ.
ನ್ಯಾ.ಸಾಚಾರ್ ವರದಿಯ ಅನ್ವಯ ಸಮಾಜದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತರ ಶಿಕ್ಷಣವನ್ನು ಉತ್ತೇಜಿಸಲು ಸ್ಥಾಪನೆಯಾದ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್, ಭಾರತ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಧನಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸೇರಿದಂತೆ ಇತರ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅಲ್ಪಸಂಖ್ಯಾತರ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಫೌಂಡೇಶನ್ ಪ್ರಮುಖ ಪಾತ್ರ ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಈ ನಿರ್ಧಾರವು ಅವಕಾಶ ವಂಚಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೀಡಲಾಗಿದ್ದ ಅವಕಾಶವನ್ನು ಕಸಿಯುವ ಹುನ್ನಾರವಾಗಿದೆ. ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿಯವರು ಹೊರಡಿಸಿರುವ ಆದೇಶದಲ್ಲಿ ಫೌಂಡೇಶನನ್ನು ಮುಚ್ಚಲು ಯಾವುದೇ ಸಕಾರಣವನ್ನು ನೀಡಿದೇ ಹಠಾತ್ತಾಗಿ ಮುಚ್ಚುವ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ತಿಳಿಸಿದ್ದಾರೆ.
‘ದೇಶದಲ್ಲಿ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಅವರ ಮೇಲೆ ನಿರಂತರ ದೌರ್ಜನ್ಯ, ದ್ವೇಷದ ರಾಜಕಾರಣದ ಪರಮಾವಧಿಯಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರವನ್ನು ಶೀಘ್ರ ಕೈಬಿಡಬೇಕು. ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಹಾಗೂ ಫೌಂಡೇಶನ್ ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು’
ಪ್ರೊ.ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ







