ಅಂತಿಮ ಮತದಾರರ ಪಟ್ಟಿ ಪ್ರಕಟ: ಒಟ್ಟು 98,43,577 ಮತದಾರರು
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರ ಕ್ಷೇತ್ರಗಳು ಸೇರಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 98,43,577 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಅಂತಿಮ ಮತದಾರರ ಪಟ್ಟಿಯಲ್ಲಿ 50,78,525 ಪುರುಷ ಮತದಾರರರು, 47,63,268 ಮಹಿಳಾ ಮತದಾರರು ಹಾಗೂ 1,784 ಇತರ ಮತದಾರರು ಸೇರಿ ಒಟ್ಟು 98,43,577 ಮತದಾರರಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರದ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಎಲ್ಲ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ಮತದಾರರ ಮಾಹಿತಿಯನ್ನು (ಹೆಸರು, ತಂದೆಯ ಹೆಸರು, ಸಂಬಂಧ, ಲಿಂಗ, ಜನ್ಮ ದಿನಾಂಕ ವಿಳಾಸ ಮತ್ತು ಪೋಟೊ) ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ www.ceokarnataka.kar.nic.in ಮತ್ತು ಬಿಬಿಎಂಪಿ www.bbmp.gov.in ವೆಬ್ಸೈಟ್ ನಲ್ಲಿಯೂ ಅಂತಿಮ ಮತದಾರರ ಪಟ್ಟಿಯನ್ನು ಅಪ್ಲೋಡ್ ಮಾಡಲಾಗುವುದು ಎಂದರು.
ಸಾರ್ವಜನಿಕರು/ಮತದಾರರು ಮತದಾರರ ಪಟ್ಟಿ ಕಾರ್ಯ ಚಟುವಟಿಕೆಗಳ ಲಾಭವನ್ನು ಪಡೆದುಕೊಂಡು ಯಾವುದೇ ಕಛೇರಿಗೆ ಹೋಗದೆ ಅವರಿರುವ ಸ್ಥಳದಿಂದಲೆ ವೆಬ್ ಪೋರ್ಟಲ್- Voters.eci.gov.in, ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ಹಾಗೂ 1950 ವೋಟರ್ ಹೆಲ್ಪ್ ಲೈನ್ ಮುಖಾಂತರ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಆಗಿರುವ ತಪ್ಪುಗಳಿಗೆ ಸಂಬಂಧಪಟ್ಟ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ದಯಾನಂದ, ಸ್ನೇಹಲ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.