ಬೆಂಗಳೂರು | ಅಶ್ಲೀಲ ವೀಡಿಯೊ ಹರಿಯಬಿಡುವುದಾಗಿ ಜ್ಯೋತಿಷಿಗೆ ಬೆದರಿಕೆ : ಪ್ರಕರಣ ದಾಖಲು

ಬೆಂಗಳೂರು: ಅಶ್ಲೀಲ ವೀಡಿಯೊಗಳನ್ನು ಹರಿಬಿಡುವುದಾಗಿ ಬೆದರಿಸಿ ಜ್ಯೋತಿಷಿ ಆನಂದ ಗುರೂಜಿ ಎಂಬವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪದಡಿ ಟಿ.ವಿ.ಮಾಜಿ ನಿರೂಪಕಿ ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆನಂದ ಗುರೂಜಿ ನೀಡಿದ ದೂರಿನನ್ವಯ ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ನಿನ್ನ ಅಶ್ಲೀಲ ವೀಡಿಯೊಗಳಿವೆ, ಹಣವನ್ನು ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದರೂ ಹಣಕ್ಕಾಗಿ ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ತನ್ನ ಕಾರು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ’ ಎಂದು ಆನಂದ್ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ.
ಮುಖವಾಡ, ಸಾಮ್ರಾಟ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ಗಳಲ್ಲಿ ತನ್ನ ತೇಜೋವಧೆಗೊಳಿಸಿ ಮಾನಸಿಕವಾಗಿ ನೋವುಂಟು ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆನಂದ ಗುರೂಜಿ ದೂರಿನಲ್ಲಿ ಒತ್ತಾಯಿಸಿದ್ದಾರೆ.





