ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಹಾಸನ್ ಪ್ರತಿಕೃತಿ ದಹನ: ಇಬ್ಬರು ಕನ್ನಡಪರ ಹೋರಾಟಗಾರರ ವಿರುದ್ಧ ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರ ಪ್ರತಿಕೃತಿ ದಹಿಸಿದ ಆರೋಪದಡಿ ಇಬ್ಬರು ಕನ್ನಡಪರ ಹೋರಾಟಗಾರರ ವಿರುದ್ಧ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇಲೆ ಕರುನಾಡ ಯುವ ಸೇನೆಯ ಅಧ್ಯಕ್ಷ ರವಿಕುಮಾರ್ ಹಾಗೂ ಬಸವೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 28ರಂದು ರಾತ್ರಿ 11.45ರ ಸುಮಾರಿಗೆ ಬಸವೇಶ್ವರನಗರದ ಪವಿತ್ರ ಪ್ಯಾರಡೈಸ್ ವೃತ್ತದ ಬಳಿ ರವಿಕುಮಾರ್ ಹಾಗೂ ಬಸವೇಶ್ ಅವರು ನಟ ಕಮಲ್ ಹಾಸನ್ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ. ಅವರ ಈ ಕೃತ್ಯವು ಸಾರ್ವಜನಿಕ ಶಾಂತಿಯನ್ನು ಕದಡಿದ್ದಲ್ಲದೆ, ಮಧ್ಯರಾತ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಏನಿದು ವಿವಾದ?: ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.





